ಗೋಪೂಜೆ, ಗೋಹತ್ಯೆಯ ಕುರಿತು ಪ್ರಮುಖ ಪ್ರಶ್ನೆಗಳನ್ನೆತ್ತಿದ್ದ `ತಬ್ಬಲಿಯು ನೀನಾದೆ ಮಗನೆ’

ಗೋ ರಕ್ಷಣೆ, ಗೋಮಾಂಸ ಸೇವನೆಯ  ಪರ-ವಿರೋಧಾಭಿಪ್ರಾಯಗಳು  ಇಂದು ನಡೆಯುತ್ತಿರುವುದೆಲ್ಲವೂ ಬೇರೆಯೇ

ರೀತಿಯಲ್ಲಿ 1977ರಲ್ಲಿ ನಿರ್ಮಾಣವಾದ ಬಿ ವಿ ಕಾರಂತ್, ಗಿರೀಶ್ ಕಾರ್ನಾಡ್ ನಿರ್ದೇಶನದ ಈ ಚಿತ್ರದಲ್ಲಿ ಪ್ರತಿಬಿಂಬಿತವಾಗಿದೆ.

ಸಿನೆಮಾಗಳು ನಮ್ಮ ಅತೀವ ನಿರೀಕ್ಷೆಗಳು ಮತ್ತು ಕನಸುಗಳ ಭಂಡಾರವಾಗಿರುವುದರಿಂದ ಅವುಗಳು  ವಿಲಕ್ಷಣವಾಗಿ ಭವಿಷ್ಯ ಸೂಚಕವೂ ಆಗಬಹುದು. ಅಂತೆಯೇ ನಾಲ್ಕು ದಶಕಗಳ ಹಿಂದೆ ತೆರೆ ಕಂಡ ಕನ್ನಡ ಚಲನಚಿತ್ರವೊಂದು ಇಂದು ನಮ್ಮನ್ನು ಅತಿಯಾಗಿ ಕಾಡುತ್ತಿರುವ ದುಃಸ್ವಪ್ನದ ಸೂಚಕವಾಗಿದೆ.

ಅದುವೇ 1977ರಲ್ಲಿ ತೆರೆ ಕಂಡ ಕನ್ನಡ ಚಿತ್ರ `ತಬ್ಬಲಿಯು ನೀನಾದೆ ಮಗನೆ.’ ಈ ಚಿತ್ರದಲ್ಲಿ ಉದ್ರಿಕ್ತ ಹಳ್ಳಿಗರು ಮಹಿಳೆಯೊಬ್ಬಳ ಮನೆಗೆ ಕಲ್ಲೆಸೆಯುವ ದೃಶ್ಯವೊಂದಿದೆ. ದನವೊಂದನ್ನು ಹತ್ಯೆ  ಮಾಡಬೇಕೆಂದು ಆಕೆ ಹೇಳಿದ್ದು ಅವರಿಗೆ ತಿಳಿದಿದ್ದೇ ಇದಕ್ಕೆ ಕಾರಣ. ಆಕೆ ಗಾಳಿಯಲ್ಲಿ ಗುಂಡು ಹಾರಿಸಿದಾಗ ಗುಂಪು ಚದುರಿದರೂ ತನ್ನ ಪತ್ನಿಯ ಕೃತ್ಯಕ್ಕೆ ತಾನು ಬೆಲೆ ತೆರಲು ಸಿದ್ಧನೆಂದು ಆಕೆಯ ಪತಿ ಗ್ರಾಮಸ್ಥರಿಗೆ ಭರವಸೆ ನೀಡಿದ ಬಳಿಕವಷ್ಟೇ ಅವರು ಅಲ್ಲಿಂದ ತೆರಳಿದ್ದರು.

ಸ್ವಘೋಷಿತ ಗೋ ರಕ್ಷಕರ ಹಿಂಸಾತ್ಮಕ ಕೃತ್ಯಗಳು ಸಾವುಗಳಿಗೆ ಕಾರಣವಾಗುತ್ತಿರುವುದು ಮತ್ತು ಕಾನೂನಿನ ಲೋಪದೋಷಗಳನ್ನು ಚೆನ್ನಾಗಿ ಸದುಪಯೋಗಪಡಿಸುತ್ತಿರುವ ಇಂದಿನ ರಾಜಕೀಯ ವಾತಾವರಣದಲ್ಲೂ ಇದೇ ದೃಶ್ಯ  ಅಹಿತಕರವಾಗಿ ನಮ್ಮನ್ನು ಕಾಡುತ್ತದೆ,

ಬಿ ವಿ ಕಾರಂತ್ ಹಾಗೂ ಗಿರೀಶ್ ಕಾರ್ನಾಡರ `ತಬ್ಬಲಿಯು ನೀನಾದೆ ಮಗನೆ’ ಚಲನಚಿತ್ರ  ಹಿಂದೂಗಳು ಗೋವಿಗೆ ನೀಡುವ ಧಾರ್ಮಿಕ ಮಹತ್ವ ಹಾಗೂ ಕೃಷಿ ಆಧರಿತ ಗ್ರಾಮೀಣ ಭಾರತದಲ್ಲಿ ಅವುಗಳ ಆರ್ಥಿಕ ಪ್ರಯೋಜನಗಳ ನಡುವಣ ಸಂಘರ್ಷವನ್ನು ಪ್ರೇಕ್ಷಕರ ಮುಂದೆ ತೆರೆದಿಡುತ್ತದೆ. ಎಸ್ ಎಲ್ ಭೈರಪ್ಪನವರ  ಕನ್ನಡ ಕಾದಂಬರಿಯಾಧರಿತ ಈ ರಾಷ್ಟ್ರಪ್ರಶಸ್ತಿ ವಿಜೇತ ಚಿತ್ರ ಹಿಂದಿಯಲ್ಲಿ `ಗೋಧೂಳಿ’ ಎಂಬ ಹೆಸರಿನಲ್ಲಿ ತೆರೆ ಕಂಡಿತ್ತು.

ಚಿತ್ರಕಥೆ ಹೀಗೆ ಸಾಗುತ್ತದೆ :  ಇತ್ತೀಚೆಗಷ್ಟೇ ನಿಧನನಾದ ಭೂಮಾಲಕನೊಬ್ಬನ ಪುತ್ರ ಕಾಳಿಂಗ (ಮಾನು) ಅಮೇರಿಕಾದಲ್ಲಿ ಕೃಷಿಯಲ್ಲಿ ಅಧ್ಯಯನ ನಡೆಸಿ ತನ್ನ ಗ್ರಾಮಕ್ಕೆ ತನ್ನ ಅಮೇರಿಕನ್ ಪತ್ನಿ ಲಿಡಿಯಾ ಜತೆಗೂಡಿ ಆಗಮಿಸಿ ಗ್ರಾಮವನ್ನು ಅಭಿವೃದ್ಧಿ ಪಥದಲ್ಲಿ ಸಾಗಿಸಲು ಶ್ರಮಿಸುತ್ತಾನೆ. ಆದರೆ ಆತ ಗ್ರಾಮದ ದೇವಳದ ಬಾವಿಯ ನೀರನ್ನು ಕೃಷಿ ಉದ್ದೇಶಗಳಿಗೆ ಬಳಸಿದಾಗ ತನ್ನ ಆತ್ಮೀಯ ಸ್ನೇಹಿತ  ಹಾಗೂ ಅರ್ಚಕ ವೆಂಕಟರಮಣನ (ನಾಸಿರುದ್ಧಿನ್ ಶಾ) ಕೋಪಕ್ಕೆ ತುತ್ತಾಗುತ್ತಾನೆ.

ಗೋಹತ್ಯೆ ವಿರೋಧಿ ಎಂದು ಅರ್ಥೈಸಲಾದಂತಹ ಈ ಚಲನಚಿತ್ರವನ್ನು ನಿರ್ಮಿಸಿದ್ದಕ್ಕೆ ಕಾರ್ನಾಡ್ ನಂತರ ವಿಷಾದ ವ್ಯಕ್ತಪಡಿಸಿದ್ದರೂ ಈ ಚಿತ್ರದಲ್ಲಿ ಯಾವುದೇ ಪಾತ್ರಧಾರಿಯನ್ನು ವೈಭವೀಕರಿಸಲಾಗಿಲ್ಲ ಯಾ ಕೆಟ್ಟ ದೃಷ್ಟಿಯಿಂದಲೂ ತೋರಿಸಲಾಗಿಲ್ಲ. ಈ ಚಿತ್ರದ ಪ್ರತಿಯೊಬ್ಬ ಪಾತ್ರಧಾರಿಯೂ ಗೋವಿನ ಮಹತ್ವವನ್ನು ವಿವಿಧ ರೀತಿಯಲ್ಲಿ ್ಲಅರ್ಥೈಸುತ್ತಾನೆ. ಕಾಳಿಂಗನಿಗೂ ದನಗಳು ಮಹತ್ವದ್ದಾಗಿದ್ದರೆ ಆತ ಅವುಗಳನ್ನು ವಾಣಿಜ್ಯ ಲಾಭದ ದೃಷ್ಟಿಯಿಂದ ನೋಡುತ್ತಾನೆ. ಆತನ ತಾಯಿಗೆ ಅವುಗಳನ್ನು ಕಂಡರೆ ಸಂತಸ ಹಾಗೂ ಹೆಮ್ಮೆ. ಕಾಳಿಂಗನ ತಾಯಿ ತನ್ನ ಸೊಸೆ ಲಿಡಿಯಾಳನ್ನು ಪ್ರಥಮ ಬಾರಿ ನೋಡಿದಾಗ ಆಕೆಗೆ ಕುಟುಂಬದ ಒಡೆತನದ ಗೋವುಗಳನ್ನು ನೀಡಿ ಆಕೆ ತನಗೆ ಒಪ್ಪಿಗೆ ಎಂಬುದನ್ನು ಸೂಚಿಸುತ್ತಾಳೆ. ಆದರೆ ಮುಂದೆ ಲಿಡಿಯಾ ಗೋಮಾಂಸ ತಿನ್ನುತ್ತಾಳೆಂದು ತಿಳಿದಾಗ ಆಕೆಗೆ ಆಘಾತವಾಗುತ್ತದೆ.

ಅತ್ತ ಗೋವುಗಳಿಗೆ ನೀಡಲಾಗುತ್ತಿರುವ ಅತಿಯಾದ ಮಹತ್ವ ಲಿಡಿಯಾಳಿಗೆ ಆಶ್ಚರ್ಯ ಹುಟ್ಟಿಸುತ್ತದೆ. ಗೋವುಗಳಿಗೆ ಮಾತ್ರವೇಕೆ ಇಷ್ಟು ಗೌರವ ? ಹಂದಿ, ನಾಯಿಗಳಿಗೇಕಿಲ್ಲೆಂದು ಆಕೆ ವೆಂಕಟರಮಣನನ್ನು ಪ್ರಶಸ್ನಿಸಿದಾಗ ಆತ ಸಿಟ್ಟಾಗುತಾನೆ. ಆಕೆ ಕ್ಷಮೆ ಯಾಚಿಸಿದರೂ ಆಕೆಯ ಪ್ರಶ್ನೆಗೆ ನೇರ ಉತ್ತರ ನೀಡಲು ಆತ ಅಸಮರ್ಥನಾಗುತ್ತಾನೆ.

ಲಿಡಿಯಾ ಒಬ್ಬಳು ಪರಿಪೂರ್ಣ ನಾರಿ ಎಂದು ಹೇಳಲಾಗದೇ ಇದ್ದರೂ ಆಕೆ ನಯವಾಗಿ ಕೆಲ ಪ್ರಶ್ನೆಗಳನ್ನೆತ್ತಿದಾಗ ಗ್ರಾಮೀಣ ಭಾರತದಲ್ಲಿ ಗೋವುಗಳಿಗೇಕೆ ಇಷ್ಟು ಮಹತ್ವ ನೀಡಲಾಗುತ್ತಿದೆಯೆಂದು ಕೆಲವರ ಮನಸ್ಸಿನಲ್ಲಿರುವುದನ್ನಾದರೂ ಆಕೆ ಅಭಿವ್ಯಕ್ತಿಪಡಿಸಿದ್ದಾಳೆ.

ಅತ್ತ ಕಾಳಿಂಗ ತನ್ನ ಗೋವುಗಳನ್ನು ಹಾಲಿನ ಡೈರಿಯೊಂದಕ್ಕೆ ಮಾರಾಟ ಮಾಡಲು ಉದ್ದೇಶಿಸಿದ್ದಾನೆಂದು ತಿಳಿದಾಗ ವೆಂಕಟರಮಣನಿಗೆ ಆಶ್ಚರ್ಯವಾಗುತ್ತದೆ. ಆತ ಗರ್ಭಿಣಿಯಾದ ಲಿಡಿಯಾಳ ಹೊಟ್ಟೆಯಲ್ಲಿರುವ ಮಗುವಿಗೆ ಶಾಪ ನೀಡಿದಾಗ ಸಿಟ್ಟುಗೊಂಡ ಲಿಡಿಯಾ ಗೋವನ್ನು ವಧಿಸುವಂತೆ  ಹೇಳುತ್ತಾಳೆ. ನಂತರ ಕಾಳಿಂಗನ ತಾಯಿ ತನ್ನಲ್ಲಿದ್ದ ಎಲ್ಲಾ ಗೋವುಗಳನ್ನೂ ವೆಂಕಟರಮಣನ ಬಳಿ ಸುರಕ್ಷಿತವಾಗಿರಲಿ ಎಂದು ಆತನಿಗೆ ನೀಡುತ್ತಾಳೆ.

ಅತ್ತ ಮಗುವಿಗೆ ಜನ್ಮ ನೀಡಿದ ಲಿಡಿಯಾಳಿಗೆ ಮಗುವಿಗೆ ಹಾಲುಣಿಸಲು ಸಾಧ್ಯವಾಗುವುದಿಲ್ಲ. ವೆಂಕಟರಮಣನ ಬಳಿ ದನಗಳಿರುವುದರಿಂದ ಹಸಿದಿರುವ ಮಗುವಿಗೆ ಹಾ¯ನ್ನು ನೀಡಲು ಆಕೆ ಆತನ ಮೊರೆ ಹೋಗುತ್ತಾಳೆ. ಆತ ನಿರಾಕರಿಸುತ್ತಾನೆ. ಆಗ ಮತ್ತೊಂದು ಮಹತ್ವದ ಪ್ರಶ್ನೆಯನ್ನು ಆಕೆ ಎತ್ತುತ್ತಾಳೆ. “ಗೋವಿನ ದೈವತ್ವ ಹಾಗೂ ಪಾವಿತ್ರ್ಯತೆಯು  ಗೋಮಾಂಸ ಸೇವಿಸುವ ತಾಯಿಯೊಬ್ಬಳ ಮಗುವಿನ ಜೀವಕ್ಕಿಂತಲೂ ಮಹತ್ವವೇ?” ಎಂದು ಆಕೆ ಕೇಳುತ್ತಾಳೆ. ಇಲ್ಲಿ ಗೊಂದಲ ಪರಿಹಾರವಾಗದೇ ಇದ್ದರೂ ಆಕೆಯ ಪ್ರಶ್ನೆ ವೆಂಕಟರಮಣನನ್ನು ಯೋಚಿಸುವುಂತೆ ಮಾಡುತ್ತದೆ.

ಭಾರತೀಯ ಸಮಾಜದಲ್ಲಿ ಧಾರ್ಮಿಕ ವ್ಯಕ್ತಿಗಳು ಹೊಂದಿರುವ  ಪ್ರಾಮುಖ್ಯತೆಯನ್ನೂ `ತಬ್ಬಲಿಯು ನೀನಾದೆ ಮಗನೆ’ ಪ್ರತಿಬಿಂಬಿಸುತ್ತದೆ.  ಗ್ರಾಮಸ್ಥರು  ಸಲಹೆ ಸೂಚನೆಗಳಿಗೆ ಯಾವತ್ತೂ ಮೃದು ಸ್ವಭಾವದ ವೆಂಕಟರಮಣನ ಬಳಿ ಧಾವಿಸುತ್ತಿದ್ದರೂ  ಆತ ಹಸಿದಿರುವ ಮಗುವಿಗೆ ಹಾಲು ನೀಡಲು ನಿರಾಕರಿಸಿದಾಗ ಅವರು ಆತನನ್ನು ಧಿಕ್ಕರಿಸುತ್ತಾರೆ.

ತನ್ನ ಮಾತು ಹಾಗೂ ಕೃತಿಗಳ ಬಗ್ಗೆ ಗಂಭೀರವಾಗಿ ಆತ್ಮಾವಲೋಕನ ಮಾಡಲು ವೆಂಕಟರಮಣನಿಗಿದ್ದ ಸಾಮಥ್ರ್ಯ ಇಂದಿನ ಗೋ ರಕ್ಷಕರಿಗೆ ಒಂದು ಮುಖ್ಯ ಪಾಠವಾಗಿದೆ.

ತನ್ನ ತಪ್ಪಿಗೆ ಪಶ್ಚಾತ್ತಾಪಪಟ್ಟ ಅರ್ಚಕ ಹಾಲಿನ ಡೈರಿಗೆ ಮಾರಾಟ ಮಾಡಿದ ತನ್ನೆಲ್ಲಾ ಗೋವುಗಳನ್ನು ಹಿಂದಕ್ಕೆ ತರಲು ಕಾಳಿಂಗನಿಗೆ ಆದೇಶಿಸುತ್ತಾನೆ. ಆದರೆ ಅಲ್ಲಿಗೆ ಹೋದ ಕಾಳಿಂಗನಿಗೆ ಅಲ್ಲಿ ಹೊಸದಾಗಿ ನಿರ್ಮಾಣವಾದ ರಸ್ತೆಯೊಂದರಲ್ಲಿ ಸಾಗುತ್ತಿದ್ದ ಹಲವಾರು ಹಸುಗಳ ನಡುವೆ ತನ್ನ ಹಸುಗಳನ್ನು ಗುರುತಿಸಲು ಕಷ್ಟವಾಗುತ್ತದೆ. ಇಲ್ಲಿ ಗೋವುಗಳು ಸಾಂಪ್ರದಾಯಿಕ ಭಾರತೀಯ ಮೌಲ್ಯಗಳು, ಅಭಿವೃದ್ಧಿಯ ಹಾದಿಯಲ್ಲಿ ಸಾಗುತ್ತಾ  ಗುರುತು ಪತ್ತೆ ಹಚ್ಚಲಾಗದಂತಾಗುತ್ತವೆ ಎಂಬುದರ ದ್ಯೋತಕವಾಗಿದೆ.

ರಾಜಕೀಯವಾಗಿ ಮೇಲೇರುವ ಹಾದಿಯಲ್ಲಿ ಗೋವುಗಳನ್ನು ಹಿಡಿದು ನಿಲ್ಲಿಸಿದಾಗ ಇದೇ ಸತ್ಯ  ಜಾಹೀರಾಗುತ್ತದೆ. ಅಧಿಕಾರದ ದಾಹದಲ್ಲಿ ಗೋವುಗಳು ದಾಳಕ್ಕಿಂತ ಹೆಚ್ಚೇನಲ್ಲ. ಹೀಗಾದಾಗ `ತಬ್ಬಲಿಯು ನೀನಾದೆ ಮಗನೆ’ ಚಿತ್ರದ ಹೆಚ್ಚಿನ ಪಾತ್ರಧಾರಿಗಳಂತೆ ಯಾರು ಕೂಡ ನಿಜಾರ್ಥದಲ್ಲಿ ಗೆಲುವು ಸಾಧಿಸುವುದಿಲ್ಲ.