ಕುಕ್ಕೆ ಯಾತ್ರೆಗೆ ಬಂದ 9 ಜನ ಸ್ಪಾಟ್ ಡೆತ್

ಯಲ್ಲಾಪುರ ಬಳಿ ಭೀಕರ ಅಪಘಾತ

ನಮ್ಮ ಪ್ರತಿನಿಧಿ ವರದಿ

ಯಲ್ಲಾಪುರ (ಉ ಕ) : ತಾಲೂಕಿನ ಅರಬೈಲ್ ಬಳಿ ಕಾರು ಮತ್ತು ಲಾರಿಯ ನಡುವೆ ಬುಧವಾರ ಸಂಭವಿಸಿದ ಭೀಕರ ಅಪಘಾತದಲ್ಲಿ 9 ಜನರು ಸ್ಥಳದಲ್ಲೇ ಮೃತಪಟ್ಟು, ಒಬ್ಬರು ಗಂಭೀರ ಗಾಯಗೊಂಡಿದ್ದಾರೆ.

ವೈಷ್ಣವಿ ವಿವೇಕ ಘಾಟಗೆ ರಾಯಭಾಗ, ಅಭಿನವ ಚಂದ್ರಕಾಂತ ಕಾಂಬಳೆ ಕಮಲಾಪುರ, ವರದರಾಜ್ ವಿವೇಕ ಘಾಟಗೆ, ಸಚಿನ್ ಮಧುಕರ್ ಜಾಂಡೇನವರ್, ವಿವೇಕ ವಸಂತ ಘಾಟಗೆ, ರೇಣುಕಾ ಚಂದ್ರಕಾಂತ ಕಾಂಬಳೆ ಕಮಲಾಪುರ, ಗೌರವ ವಸಂತ ಮೇತ್ರಿ ನಿಡಗುಂಡಿ, ಮೇನಕಾ ವಿವೇಕ ಘಾಟಗೆ, ಚಾಲಕ ಮುಜಾಹಿದ್ ಇಕ್ಬಾಲ್ ನಾಯಕವಾಡಿ ಮೃತಪಟ್ಟವರು. ಮೃತಪಟ್ಟ ಎಲ್ಲರೂ ರಾಯಭಾಗದವರಾಗಿದ್ದಾರೆ. ಮೃತರಲ್ಲಿ ಹಲವರು ರಾಯಭಾಗದ ಮಾಜಿ ಶಾಸಕ ಶ್ಯಾಮರಾವ್ ಘಾಟಗೆ ಕುಟುಂಬದವರಾಗಿದ್ದಾರೆ.

ಗಜಾನನ ಬಾಪು ಮೇತ್ರಿ ಎಂಬಾತ ಗಾಂiÀiಗೊಂಡಿದ್ದು, ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರೆಲ್ಲರೂ ಕುಕ್ಕೆ ಸುಬ್ರಹ್ಮಣ್ಯ ದೇವರ ದರ್ಶನ ಪಡೆದು ಮಹೇಂದ್ರಾ ಕ್ಸೈಲೋ ಕಾರಿನಲ್ಲಿ ವಾಪಸ್ ಬರುತ್ತಿದ್ದು, ಅತೀವೇಗವಾಗಿ ಬಂದ ಕಾರಿನ ಚಾಲಕ ಅರಬೈಲ್ ಬಳಿ ಎದುರುಗಡೆಯಿಂದ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದಿದ್ದಾನೆ. ಕಾರು ಸಂಪೂರ್ಣ ಜಖಂಗೊಂಡಿದೆ.

ಕಾರಿನಲ್ಲಿ ಸಿಕ್ಕು ಮೃತಪಟ್ಟವರನ್ನು ಹೊರಗೆ ತೆಗೆಯಲು ಅರಬೈಲ್ ಭಾಗದ ಯುವಕರು ಪೊಲೀಸರಿಗೆ ನೆರವಾದರು. ಅಪಘಾತದಿಂದ ಕೆಲವು ಕಾಲ ಹೆದ್ದಾರಿ ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಗಿದ್ದು, ಕ್ರೇನ್ ಬಳಸಿ ವಾಹನವನ್ನು ಬದಿಗೆ ಸರಿಸಿ ಪೋಲಿಸರು ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಯಲ್ಲಾಪುರ ವ್ಯಾಪ್ತಿಯಲ್ಲಿ ಇತ್ತೀಚಿನ ವರ್ಷಗಳಲ್ಲಿ ನಡೆದ ಭೀಕರ ಅಪಘಾತ ಇದಾಗಿದೆ. ಅಪಘಾತದ ಭೀಕರತೆ ಎಲ್ಲರನ್ನೂ ದಿಗ್ಬ್ರಮೆಗೊಳಿಸಿತ್ತು. ಕಾರಿನಲ್ಲಿ 4 ಮಂದಿಯನ್ನು ಮನುಷ್ಯ ಪ್ರಯತ್ನದಿಂದ ಹೊರತೆಗೆಯಲು ಸಾಧ್ಯವಾಗದೇ ಕ್ರೇನ್ ಸಹಾಯದಿಂದ ಹೊರತೆಗೆಯಲಾಯಿತು. 5 ಜನರು ಅಪಘಾತದ ಹೊಡೆತಕ್ಕೆ ರಸ್ತೆಯಲ್ಲಿ ಎಸೆಯಲ್ಪಟ್ಟಿದ್ದರು. ಶವವನ್ನು ತಾಲೂಕಾಸ್ಪತ್ರೆಗೆ ಇರಿಸಲಾಗಿದ್ದ ವೇಳೆ ಜನ ನೋಡಿ ದುಃಖಿಸಿದ್ದು ಒಂದೆಡೆಯಾದರೆ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.

3 ಮಂದಿ ಮಕ್ಕಳು ಹೆಣವಾಗಿರುವ ದೃಶ್ಯ ಎಲ್ಲರ ಮನ ಕರಗಿತ್ತು. ಒಂದು ಕುಟುಂಬದ ಗಂಡ-ಹೆಂಡತಿ ಮಕ್ಕಳು ಎಲ್ಲರೂ ಏಕಕಾಲದಲ್ಲಿ ಅಪಘಾತದಲ್ಲೇ ಕೊನೆಯುಸಿರು ಕಂಡಿದ್ದು ದುರದೃಷ್ಟಕರ.