`ಜ್ಯುಡಿಶಿಯಲ್ ಲೇಔಟಿನಲ್ಲಿ ಜಮೀನು ಪಡೆದ ಶೇ 80ರಷ್ಟು ನ್ಯಾಯಾಧೀಶರು’

ಬೆಂಗಳೂರು : ರಾಜ್ಯ ಲೋಕಾಯುಕ್ತಕ್ಕೆ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಸಿ ವಿಶ್ವನಾಥ್ ಶೆಟ್ಟಿ ಅವರನ್ನು ನೇಮಕ ಮಾಡುವುದಕ್ಕೆ ಅಪಸ್ವರ ಎತ್ತಿರುವ ಬಿಜೆಪಿ ನಾಯಕ ಜಗದೀಶ್ ಶೆಟ್ಟರ್ ಅವರು ಮಾಡಿರುವ ಆರೋಪವನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯನವರು ನಿರಾಕರಿಸಿದ್ದಾರೆ. ಸರಕಾರ ಲೋಕಾಯುಕ್ತ ಹುದ್ದೆಯನ್ನು ಭರ್ತಿ ಮಾಡಲು ಆಸಕ್ತಿ ತೋರದೇ ಖಾಲಿಯಾಗಿಯೇ ಇರಿಸಲು ಯತ್ನಿಸುತ್ತಿದೆ ಎಂದು ಶೆಟ್ಟರ್ ಆಪಾದಿಸಿದ್ದರು.

ಪತ್ರಕರ್ತರೊಂದಿಗೆ ಮಾತನಾಡಿದ ಸೀಎಂ, ಲೋಕಾಯುಕ್ತ ಹುದ್ದೆಗೆ ನ್ಯಾಯಮೂರ್ತಿ ವಿಶ್ವನಾಥ ಶೆಟ್ಟಿ ಅವರನ್ನು ನೇಮಕ ಮಾಡಿಕೊಳ್ಳುವ ಸಂಬಂಧ ನಡೆದಿದ್ದ ಸಮಿತಿ ಸಭೆಯಲ್ಲಿ ನ್ಯಾ ಶೆಟ್ಟಿ ಸೇರಿದಂತೆ ಮೂವರ ಹೆಸರನ್ನು ವಿರೋಧ ಪಕ್ಷದ ಮುಖಂಡರೂ ಶಿಫಾರಸು ಮಾಡಿದ್ದರು. ಜಗದೀಶ್ ಶೆಟ್ಟರ್ ಅವರು ಉದ್ದೇಶ ಪೂರ್ವಕವಾಗಿಯೇ ವಿಶ್ವನಾಥ್ ಅವರ ಹೆಸರನ್ನು ಶಿಫಾರಸು ಮಾಡಿದ್ದರೇ ಎಂದವರು ಪ್ರಶ್ನಿಸಿದರು.

ತಮ್ಮ ಪ್ರಕಾರ ಶೆಟ್ಟಿ ಅವರು ಅಕ್ರಮವಾಗಿ ಯಾವುದೇ ಜಮೀನು ಪಡೆದುಕೊಂಡಿಲ್ಲ. ಶೇ 80ರಷ್ಟು ನ್ಯಾಯಾಧೀಶರು  ಜ್ಯುಡಿಶೀಯಲ್ ಲೇಔಟಿನಲ್ಲಿ ಜಾಗ ಪಡೆದುಕೊಂಡಿದ್ದಾರೆ ಎಂದು ಸಿದ್ಧರಾಮಯ್ಯ ಹೇಳಿದರು.