ಇಬ್ಬರು ಕಾರ್ಮಿಕರ ಕೈ ಕತ್ತರಿಸಿದ 8 ಮಂದಿಗೆ ಜೀವಾವಧಿ ಶಿಕ್ಷೆ

ಭುವನೇಶ್ವರ : ಮೂರು ವರ್ಷದ ಹಿಂದೆ ಇಬ್ಬರು ವಲಸೆ ಕಾರ್ಮಿಕರ ಕೈ ಕತ್ತರಿಸಿದ ಎಂಟು ಮಂದಿ ದುರಾತ್ಮರಿಗೆ ಒಡಿಶಾದ ಕಲ್ಹಾಂಡಿಯನ್ ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ಘೋಷಿಸಿದೆ. ಎಂಟು ಮಂದಿಯನ್ನು ಪ್ರಭೇಶ್, ವೈಕುಂಠ, ಅರ್ಜುನ್ ಭೋಯಿ, ಗಂಗಾಧರ ದಾಸ್, ಬಾನ ಮಝಿ, ಜಯಸೆನ್ ಥೆಲಾ, ಬಿಮಲಾ ರೌತ್, ಮಂಟು ನಿಯಾಲ್ ಮತ್ತು ಪರಶುರಾಮ ನಾಯಕ್ ಎಂದು ಗುರುತಿಸಲಾಗಿದೆ. ಹಿಂದೆ ಈ ಆರೋಪಿಗಳ ವಿರುದ್ದ ಜೀತ ಕಾರ್ಮಿಕ ಕಾಯ್ದೆ ಮತ್ತು ಐಪಿಸಿಯ ವಿವಿಧ ಸೆಕ್ಷನ್ನುಗಳಡಿಯಲ್ಲಿ ದೂರು ದಾಖಲಿಸಲಾಗಿತ್ತು.

ಈ ಪ್ರಕರಣ ಬಗ್ಗೆ 2014ರಲ್ಲಿ ಸುಪ್ರೀಂ ಕೋರ್ಟು ಆಘಾತ ವ್ಯಕ್ತಪಡಿಸಿತ್ತು. “ಏನು ನಡೆಯುತ್ತಿದೆ ? ನಾವು ಯಾವ ದೇಶದಲ್ಲಿ ಜೀವಿಸುತ್ತಿದ್ದೇವೆ ? ಅತ್ಯಂತ ಕೀಳು ಮಟ್ಟದ ಸಮಾಜಗಳಲ್ಲೂ ಇಂತಹ ದುಷ್‍ಋತ್ಯಗಳು ನಡೆಯುವುದಿಲ್ಲ” ಎಂದು ಸುಪ್ರೀಂ ಕೋರ್ಟು ಉದ್ಘರಿಸಿತ್ತು.

ಕಾರ್ಮಿಕ ಕಾಂಟ್ರಾಕ್ಟರ್ ಪ್ರಬೇಶ್ ಮತ್ತು ಅವರ ಸಹಚರರು ಬುಡಕಟ್ಟು ಜನಾಂಗದ ನೀಲಾಂಬರ್ ಡಂಗ್ಡಮಝಿ ಮತ್ತು ದಲಿತ ಯುವಕ ನಿಯಾಲ ನಿಯಾಲ್ ಎಂಬಿಬ್ಬರ ಕೈಗಳನ್ನು 2013ರ ಡಿಸೆಂಬರ್ ತಿಂಗಳಲ್ಲಿ ಆಂಧ್ರಪ್ರದೇಶಕ್ಕೆ ಪ್ರಯಾಣ ನಿರಾಕರಿಸಿದರೆಂಬ ಕಾರಣಕ್ಕೆ ಕತ್ತರಿಸಿದ್ದರು.  ಇಬ್ಬರಿಗೂ ತಲಾ 14,000 ಹಣ ಪಾವತಿಸಿ ಇಟ್ಟಿಗೆ ಗೂಡಿನಲ್ಲಿ ಕೆಲಸ ಮಾಡುವಂತೆ ಒತ್ತಾಯಿಸಲಾಗಿತ್ತು. ಆದರೆ ಕಾರ್ಮಿಕರಿಬ್ಬರು ಇದನ್ನು ನಿರಾಕರಿಸಿದ್ದು, ಇದರಿಂದ ಕೋಪಗೊಂಡ ಪ್ರಬೇಶ್ ಕಂಠಮಟ್ಟ ಕುಡಿದು ಬಂದು ಸಹಚರರ ಸಹಾಯದಿಂದ ಬೋಳಂಗೀರ್ ಕಾಡಿನಲ್ಲಿ ಇಬ್ಬರ ಕೈಯನ್ನೂ ಕತ್ತರಿಸಿದ್ದಾನೆ.