8 ಮಲ್ಪೆ ಮೀನುಗಾರರ ರಕ್ಷಣೆ

ಇಂಜಿನ್ ಕೆಟ್ಟು ಕಾರವಾರ ಸಮುದ್ರದಲ್ಲಿ ನಿಂತ ಬೋಟ್ 

ನಮ್ಮ ಪ್ರತಿನಿಧಿ ವರದಿ

ಕಾರವಾರ : ಇಲ್ಲಿನ ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಬೋಟ್ ಇಂಜಿನ್ ಕೆಟ್ಟುಹೋಗಿ ಅಪಾಯದಲ್ಲಿದ್ದ 8 ಮಂದಿ ಮೀನುಗಾರರನ್ನು ತಟ ರಕ್ಷಕ ದಳ ರಕ್ಷಿಸಿದ್ದಾರೆ.

ಮಲ್ಪೆ ಮೂಲದ ಬೋಟ್ ಮೀನುಗಾರಿಕೆಯಲ್ಲಿ ತೊಡಗಿರುವಾಗ ಇಂಜಿನ್ ಕೆಟ್ಟುಹೋಗಿದೆ. ಇದರಿಂದ ಬೋಟಿನಲ್ಲಿದ್ದ ಮೀನುಗಾರರಿಗೆ ಆಹಾರ ದೊರೆಯದೆ ತೊಂದರೆಗೊಳಗಾಗಿದ್ದರು. ಕೋಸ್ಟ್ ಗಾರ್ಡ್ ಐಸಿಜಿಸಿ ಅಪೂರ್ವ ರಕ್ಷಣಾ ಹಡಗು ಗೋವಾದಿಂದ ಕರ್ನಾಟಕ ವ್ಯಾಪ್ತಿ ಪ್ರದೇಶದ ಆಳ ಸಮುದ್ರದಲ್ಲಿ ಗಸ್ತು ತಿರುಗುತ್ತಿರುವಾಗ ರಾತ್ರಿ 11.30ರ ಸುಮಾರಿಗೆ ಮಲ್ಪೆಯ ಫಾಲಾಕ್ಷ ಎಂಬ ಮೀನುಗಾರಿಕಾ ಬೋಟಿನಲ್ಲಿದ್ದ ಮೀನುಗಾರರು ರಕ್ಷಣೆಗಾಗಿ ಮೊರೆಯಿಟ್ಟಿರುವುದು ತಿಳಿದುಬಂದಿದೆ. ತಕ್ಷಣ ಕಾರ್ಯಪ್ರವೃತ್ತರಾದ ತಟರಕ್ಷಕ ಪಡೆಯ ಹಡಗು ಅಪಾಯದಲ್ಲಿರುವ ಬೋಟ್ ಸಮೀಪ ತೆರಳಿ ಮೀನುಗಾರರ ರಕ್ಷಣೆ ಮಾಡಿದೆ.

ಹಸುವಿನಲ್ಲಿದ್ದ ಮೀನುಗಾರರಿಗೆ ಆಹಾರ ನೀಡಿದ ತಟ ರಕ್ಷಕ ಪಡೆಯ ತಂತ್ರಜ್ಞರು ಕೆಟ್ಟ ಇಂಜಿನನ್ನು ದುರಸ್ತಿ ಮಾಡಲು ಪ್ರಯತ್ನಿಸಿ, ವಿಫಲರಾಗಿದ್ದಾರೆ. ಬಳಿಕ ಬೋಟನ್ನು ದೇವಗಡ್ ಲೈಟ್ ಹೌಸ್ ಸಮೀಪ ಎಳೆದುತಂದು ಬಿಟ್ಟಿದೆ. ಸೋಮವಾರ ಎಫ್ಬಿ ನಿರ್ಮಲಾ ಹಡಗಿನ ಸುಪರ್ದಿಗೆ ವಹಿಸಿಕೊಡಲಾಯಿತು. ಈ ಮೂಲಕ ಸಮುದ್ರದಲ್ಲಿ ಅಪಾಯಕ್ಕೆ ಸಿಲುಕುವ ಮೀನುಗಾರರ ರಕ್ಷಣೆಗೆ ಸದಾ ಸನ್ನದವಾಗಿರುತ್ತದೆ ಎಂಬುದನ್ನು ಕೋಸ್ಟ್ ಗಾರ್ಡ್ ಅಧಿಕಾರಿಗಳು ತಿಳಿಸಿದ್ದಾರೆ.