ದಾಖಲೆಯಿಲ್ಲದ 71 ಲಕ್ಷ ರೂ ವಶ

ಪೊಲೀಸರು ವಶಪಡಿಸಿಕೊಂಡ 2000 ರೂ ಮುಖಬೆಲೆಯ ನೋಟಿನ ಕಟ್ಟುಗಳು

* ಕಾರ್ಕಳ ಪೊಲೀಸ್ ಕಾರ್ಯಾಚರಣೆ

* ಮೂವರ ಬಂಧನ

ಕಾರ್ಕಳ : ಮಂಗಳೂರಿನಿಂದ ಉಡುಪಿ ಮಾರ್ಗವಾಗಿ ಕಾರಿನಲ್ಲಿ ಕಾರ್ಕಳಕ್ಕೆ ಸಾಗಿಸಲಾಗುತ್ತಿದ್ದ 2 ಸಾವಿರ ಮುಖಬೆಲೆಯ 71 ಲಕ್ಷ ರೂ ಹಣವನ್ನು ಕಾರ್ಕಳ ಪೊಲೀಸರು ಗುರುವಾರ ರಾತ್ರಿ ಬೈಲೂರಿನ ಜಾರ್ಕಳ ಎಂಬಲ್ಲಿ ಜಪ್ತಿ ಮಾಡಿ ಮಂಗಳೂರಿನ ನಿವಾಸಿಗಳಾದ ಇಮ್ರಾನ್, ಆಸಿಫ್ ಹಾಗೂ ದೀಪಕ್ ಶೆಟ್ಟಿ ಎಂಬವರನ್ನು ವಶಕ್ಕೆ ಪಡೆದಿದ್ದಾರೆ.

ಮಂಗಳೂರಿನ ಕುದ್ರೋಳಿಯ ಇಮ್ರಾನ್, ಆಸಿಫ್ ಹಾಗೂ ದೀಪಕ್ ಶೆಟ್ಟಿ ಎಂಬವರು ಕೆಎ 19 ಎಂಎ 7629 ನೋಂದಣಿಯ ಫೋರ್ಡ್ ಫಿಯೆಸ್ಟಾ ಕಾರಿನಲ್ಲಿ ಕಾರ್ಕಳದ ವ್ಯಕ್ತಿಯೊಬ್ಬರಿಗೆ ಈ ಹಣ ಪಾವತಿಸಲು ಬರುತ್ತಿದ್ದರು. ಕಾರ್ಕಳದ ವ್ಯಕ್ತಿಯೊಬ್ಬರಿಂದ 1 ಕೋಟಿ ರೂ ಹಳೆ ನೋಟು ಪಡೆದು ಬದಲಿಗೆ 70 ಲಕ್ಷ ರೂ ಹೊಸ ನೋಟು ಪಾವತಿಸಲು ಬರುತ್ತಿದ್ದಾರೆ ಎನ್ನುವ ಖಚಿತ ಮಾಹಿತಿ ಪಡೆದ ಕಾರ್ಕಳ ಪೊಲೀಸ್ ತಂಡ ನಾಕಾಬಂಧಿ ಹಾಕಿ ಕಾರನ್ನು ತಪಾಸಣೆ ನಡೆಸಿದಾಗ ಸೂಕ್ತ ದಾಖಲೆಗಳಿಲ್ಲದ 2 ಸಾವಿರ ಮುಖಬೆಲೆಯ 71 ಲಕ್ಷ ರೂ ಹಣವನ್ನು ಪ್ಲಾಸ್ಟಿಕ್ ಕವರಿನಲ್ಲಿ ಅಡಗಿಸಿಟ್ಟಿರುವುದು ಪತ್ತೆಯಾಗಿದೆ. ಬಳಿಕ ಈ ಮೂವರನ್ನು ಠಾಣೆಗೆ ಕರೆಯಿಸಿ ವಿಚಾರಣೆ ನಡೆಸಿದಾಗ ಹಣದ ಬಗ್ಗೆ ಸರಿಯಾದ ದಾಖಲೆ ನೀಡುವಲ್ಲಿ ವಿಫಲರಾದ ಹಿನ್ನೆಲೆಯಲ್ಲಿ ವಶಪಡಿಸಿಕೊಂಡ 71 ಲಕ್ಷ ರೂ ನಗದು, ಕಾರು ಹಾಗೂ ಮೂವರು ಆರೋಪಿಗಳನ್ನು ಮಂಗಳೂರಿನ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ.

ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು 71 ಲಕ್ಷ ರೂ ನಗದು ಹಾಗೂ ಕಾರನ್ನು ಜಪ್ತಿ ಮಾಡಿದ್ದು, ಬಂಧಿತರನ್ನು ತೀವ್ರ ವಿಚಾರಣೆಗೊಳಪಡಿಸಿದ್ದಾರೆ. ಆದರೆ ಹಣ ವಿನಿಮಯ ಮಾಡಲು ಬಂದ ಆಸಾಮಿ ನಾಪತ್ತೆಯಾಗಿದ್ದು, ಪ್ರಕರಣದಲ್ಲಿ ಸಿಕ್ಕಿಬಿದ್ದ ಈ ಮೂವರಿಗೆ ಡಿ 5ರೊಳಗೆ ಸೂಕ್ತ ದಾಖಲೆಗಳನ್ನು ಹಾಜರುಪಡಿಸಲು ಕಾಲಾವಕಾಶ ನೀಡಿದ್ದು, ಈ ಪೈಕಿ 18 ಲಕ್ಷ ರೂ.ಗಳಿಗೆ ದಾಖಲೆ ಒದಗಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ದಂಧೆಯಲ್ಲಿ ಬ್ಯಾಂಕ್ ಸಿಬ್ಬಂದಿ ಶಾಮೀಲು

ಕೇಂದ್ರ ಸರಕಾರ ಚಲಾವಣೆ ಸ್ಥಗಿತಗೊಳಿಸಿದ 500 ಹಾಗೂ 1 ಸಾವಿರ ಮುಖಬೆಲೆಯ ನೋಟುಗಳ ಬದಲಿಗೆ ಆರ್ ಬಿ ಐ ಎಲ್ಲಾ ಬ್ಯಾಂಕುಗಳಿಗೆ 2 ಸಾವಿರ ಮುಖಬೆಲೆಯ ನೋಟುಗಳನ್ನು ಪೂರೈಸಿತ್ತು. ಆದರೆ ಕೆಲ ಬ್ಯಾಂಕುಗಳ ಸಿಬ್ಬಂದಿ ಈ ಹಣವನ್ನು ಗ್ರಾಹಕರಿಗೆ ನೀಡದೆ ಕಮಿಷನ್ ಆಸೆಗಾಗಿ ಕಾಳಧನಿಕರ ಕಪ್ಪುಹಣವನ್ನು ಬಳಿಯನ್ನಾಗಿಸಲು ಬಳಸುತ್ತಿದ್ದಾರೆ ಎನ್ನುವ ಗಂಭೀರ ಆರೋಪ ಕೇಳಿಬಂದಿದೆ. ಕಾರ್ಕಳದಲ್ಲಿ ಪತ್ತೆಯಾದ ಭಾರೀ ಮೊತ್ತದ 2 ಸಾವಿರ ಮುಖಬೆಲೆಯ ನಗದು ಹಣ ಯಾವ ಬ್ಯಾಂಕಿನಲ್ಲಿ ಡ್ರಾ ಮಾಡಲಾಗಿದೆ ಎನ್ನುವ ವಿಚಾರವನ್ನು ಅಧಿಕಾರಿಗಳು ಕಲೆಹಾಕುತ್ತಿದ್ದು, ಈ ಪ್ರಕರಣದಲ್ಲಿ ಬ್ಯಾಂಕ್ ಸಿಬ್ಬಂದಿ ಶಾಮೀಲಾಗಿದ್ದಾರೆ ಎನ್ನುವ ಅನುಮಾನ ಮೂಡಿದೆ.

ನೋಟುಗಳ ವಿನಿಮಯ ವಿಚಾರದಲ್ಲಿ ಕೇಂದ್ರ ಸರಕಾರ ನೀಡಿರುವ 50 ದಿನಗಳ ಕಾಲಾವಕಾಶದಿಂದ ಕಾಳಧನಿಕರಿಗೆ ಕಪ್ಪುಹಣ ಪರಿವರ್ತನೆಗೆ ಸಾಕಷ್ಟು ಅನುಕೂಲವಾಗಿದ್ದು, ಈ ಪ್ರಕರಣದಿಂದ ಸಾಬೀತಾಗಿದೆ ಎಂದು ಜನ ಹೇಳುತ್ತಿದ್ದಾರೆ.