16 ವಿವಿಧ ವಾಹನ ಚಲಾಯಿಸಿ ದಾಖಲೆಗೈದ ಏಳರ ಬಾಲಕಿ

ಮೈಸೂರು : ಇಲ್ಲಿನ ಸೈಂಟ್ ಜೋಸೆಫ್ಸ್ ಶಾಲೆಯ ಎರಡನೇ ತರಗತಿ ವಿದ್ಯಾರ್ಥಿನಿ, ಏಳು ವರ್ಷದ ರಿಫಾಹ್ ತಸ್ಕೀನ್ ತಾನೊಬ್ಬಳು ಅದ್ಭುತ ಪ್ರತಿಭೆಯ ಬಾಲಕಿ ಎಂಬುದನ್ನು ಸಾಬೀತು ಪಡಿಸಿದ್ದಾಳೆ. ನಗರದ ಈದ್ಗಾ ಮೈದಾನ ಹಾಗೂ ಸೈಂಟ್ ಜೋಸೆಫ್ಸ್ ಶಾಲೆಯ ಮೈದಾನದಲ್ಲಿ ಈಕೆ ರವಿವಾರ 16 ವಿವಿಧ ವಾಹನಗಳನ್ನು ಸಲೀಸಾಗಿ ಚಲಾಯಿಸಿ ಎಲ್ಲರನ್ನೂ ಬೆರಗುಗೊಳಿಸಿ ಗೋಲ್ಡನ್ ಬುಕ್ ಆಫ್ ವಲ್ರ್ಡ್ ರೆಕಾಡ್ರ್ಸ್ ಪ್ರವೇಶಿಸಿದ್ದಾಳೆ.

ರಾಜ್ಯ ಸರಕಾರದ ವಿಶೇಷ ಅನುಮತಿಯೊಂದಿಗೆ ಈ ಬಾಲೆ ಲಾರಿ, ಮಹೀಂದ್ರ ಬೊಲೆರೊ, ಟಾಟಾ ಏಸ್, ಮಹೀಂದ್ರ ಸ್ಕಾರ್ಪಿಯೊ, ಟೊಯೊಟ, ಫಾರ್ಚುನರ್, ಮಾರುತಿ 800, ಮಾರುತಿ ವ್ಯಾನ್, ಮಾರತಿ ಎಸ್ಟೀಮ್, ಮಾರುತಿ ಝೆನ್, ಸ್ಯಾಂಟ್ರೊ, ಫೋರ್ಡ್ ಅಂಬುಲೆನ್ಸ್, ಹುಂಡೈ ವರ್ನ, ಟಾಟಾ ಇಂಡಿಕಾ ಮತ್ತು ಖ್ವಾಡ್ ಬೈಕ್ ಓಡಿಸಿದ್ದಾಳೆ. ಎಲ್ಲಾ ವಾಹನಗಳ ಸೀಟುಗಳನ್ನು ಆಕೆಯ ಅನುಕೂಲಕ್ಕಾಗಿ ಆಕೆಯ ತಂದೆಯೇ ತಗ್ಗುಗೊಳಿಸಿ ವಿನ್ಯಾಸಗೊಳಿಸಿದ್ದರು.

ಬಾಲಕಿಯ ಈ ಅದ್ಭುತ ಪ್ರದರ್ಶನದ ವೇಳೆ ಗೋಲ್ಡನ್ ಬುಕ್ ಆಫ್ ವಲ್ರ್ಡ್ ರೆಕಾಡ್ರ್ಸ್ ಇದರ ದಕ್ಷಿಣ ಭಾರತ ಪ್ರತಿನಿಧಿ ಸಂತೋಷ್ ಅಗರ್ವಾಲ್ ಹಾಜರಿದ್ದರು.

ಆಕೆಯ ತಂದೆ ತಾಜುದ್ದೀನ್ ನೆಲಹಾಸು ಟೈಲ್ಸ್ ಗುತ್ತಿಗೆದಾರರಾಗಿದ್ದು, ಮಾಜಿ ಅಥ್ಲೀಟ್ ಕೂಡ ಆಗಿದ್ದಾರೆ. ಹಲವಾರು ಚಿತ್ರಗಳಲ್ಲಿ ಸ್ಟಂಟ್ ಮ್ಯಾನ್ ಹಾಗೂ ಡಾನ್ಸರ್ ಆಗಿಯೂ ಅವರು ಕೆಲಸ ಮಾಡಿದ್ದಾರೆ. ಆಕೆಯ ತಾಯಿ ಬೀಬಿ ಫಾತಿಮಾ ಸರಕಾರಿ ಶಾಲೆಯೊಂದರ ಶಿಕ್ಕಿಯಾಗಿದ್ದಾರೆ. ರಿಫಾಹ್ ಚಿಕ್ಕ ಮಗುವಿದ್ದಾಗಲೇ ಆಕೆಯನ್ನು ತೊಡೆಯ ಮೇಲೆ ಕೂರಿಸಿ ತಾಜುದ್ದೀನ್ ವಾಹನ ಚಲಾಯಿಸುತ್ತಿದ್ದುದರಿಂದ ಆಕೆ ಮೂರು ವರ್ಷದವಳಿರುವಾಗಲೇ ಡ್ರೈವಿಂಗ್ ಕಲಿತಿದ್ದಳು ಎಂದು ತಾಜುದ್ದೀನ್ ಹೇಳುತ್ತಾರೆ.

ಫಾರ್ಮುಲಾ 1 ಕಾರು ಚಲಾಯಿಸುವುದು ಹಾಗೂ ಪೈಲಟ್ ಆಗುವುದು ತನ್ನ ಮುಂದಿನ ಗುರಿ ಎಂದು ರಿಫಾಹ್ ಹೇಳುತ್ತಾಳೆ.