ಮೋದಿ ಕೈಗೊಳ್ಳಬೇಕಾದ 7 ಕ್ರಮ

ಪ್ಯಾರಾಡೈಸ್ ಪೇಪರ್ಸ್

ಕಪ್ಪು ಹಣದ ಎಲ್ಲ ಪ್ರಕರಣಗಳಲ್ಲಿ ಪ್ರಾಮಾಣಿಕ ತನಿಖೆ ನಡೆಸುವುದು, ಕಪ್ಪುಹಣದ ಮಾಹಿತಿಯನ್ನು ಬಹಿರಂಗಪಡಿಸುವುದು, ಎಲ್ಲ ಚುನಾಯಿತ ಪ್ರತಿನಿಧಿಗಳ ಬ್ಯಾಂಕ್ ಠೇವಣಿ ಮತ್ತು ವ್ಯವಹಾರಗಳನ್ನು ಜನತೆಯ ಮುಂದಿಡುವುದು, ವಿಶೇಷ ತನಿಖಾ ದಳ ಕಪ್ಪುಹಣ ನಿಯಂತ್ರಣದ ಬಗ್ಗೆ ನೀಡಿರುವ ವರದಿಯನ್ನು ಜಾರಿಗೊಳಿಸುವುದು, ವಿದೇಶಿ ಕರೆನ್ಸಿ ನಿಯಂತ್ರಣ ಕಾಯ್ದೆಯ ತಿದ್ದುಪಡಿಯನ್ನು ಅನೂರ್ಜಿತಗೊಳಿಸುವುದು, ಎಲ್ಲ ಪ್ರಜೆಗಳೂ ತಮ್ಮ ವಿದೇಶಿ ಆಸ್ತಿಯನ್ನು ಘೋಷಿಸಲು ಆದೇಶಿಸುವುದು ಮತ್ತು ರಾಕೇಶ್ ಅಸ್ತಾನಾ ಅವರನ್ನು ಸಿಬಿಐನಿಂದ ಪದಚ್ಯುತಗೊಳಿಸುವುದು ಮೋದಿ ಸರ್ಕಾರದ ಆದ್ಯತೆಯಾಗಬೇಕಿದೆ.

  • ಪ್ರಶಾಂತ್ ಭೂಷಣ್ ಮತ್ತು ಯೋಗೇಂದ್ರ ಯಾದವ್

ಅಂತಾರಾಷ್ಟ್ರೀಯ ಪತ್ರಕರ್ತರ ವೇದಿಕೆ, ಜರ್ಮನಿಯ ದಿನಪತ್ರಿಕೆಯ ಸಹಯೋಗದಿಂದ ಇಂಡಿಯನ್ ಎಕ್ಸಪ್ರೆಸ್ ಪತ್ರಿಕೆ ಪ್ರಕಟಿಸಿದ ಪ್ಯಾರಾಡೈಸ್ ಪೇಪರ್ಸ್ ಮಾಹಿತಿಗಳು ಭಾರತದ ಮತ್ತು ವಿಶ್ವದ ಅರ್ಥವ್ಯವಸ್ಥೆಯಲ್ಲಿ ಕಪ್ಪುಹಣದ ಪ್ರಾಬಲ್ಯ ಮತ್ತು ಪ್ರಾಮುಖ್ಯತೆಯನ್ನು ಬಹಿರಂಗಪಡಿಸಿದೆ. ಭ್ರಷ್ಟಾಚಾರ ನಿಯಂತ್ರಣ ಮತ್ತು ಕಪ್ಪುಹಣವನ್ನು ತಡೆಗಟ್ಟುವ ಆಶ್ವಾಸನೆ ನೀಡಿ ಅಧಿಕಾರಕ್ಕೆ ಬಂದಿರುವ ನರೇಂದ್ರ ಮೋದಿ ಸರ್ಕಾರ ಕಪ್ಪುಹಣದ ವಾರಸುದಾರರೊಡನೆ ಶಾಮೀಲಾಗುವ ಮೂಲಕ ಜನತೆಗೆ ದ್ರೋಹ ಬಗೆಯುತ್ತಿದೆ. ಮೋದಿ ಸರ್ಕಾರ ಕಪ್ಪುಹಣದ ಶೋಧದಲ್ಲಿ ವಿಫಲವಾಗಿರುವುದು ಸ್ಪಷ್ಟ.

  1. 2011ರಲ್ಲಿ ಆದಾಯ ತೆರಿಗೆ ಇಲಾಖೆ ಗುಜರಾತಿನಲ್ಲಿರುವ ಸ್ಟರ್ಲಿಂಗ್ ಬಯೋಟೆಕ್ ಮತ್ತು ಸಂದೇಸಾರಾ ಉದ್ಯಮ ಸಮೂಹದ ಮೇಲೆ ದಾಳಿ ನಡೆಸಿತ್ತು. ಸಾರ್ವಜನಿಕ ಅಧಿಕಾರಿಗಳು ಮತ್ತು ಅಧಿಕಾರಸ್ಥರ ಪರವಾಗಿ ಹಣ ಸಂಗ್ರಹಿಸುವ ಈ ಕಂಪನಿಯ ಅಪರಾಧದ ಬಗ್ಗೆ ಅನೇಕ ಸಾಕ್ಷ್ಯಾಧಾರಗಳೂ ದೊರೆತಿದ್ದವು. ಐದು ಸಾವಿರ ಕೋಟಿ ರೂ ಅಕ್ರಮವನ್ನು ಕಂಡುಹಿಡಿಯಲಾಗಿತ್ತು. ಈ ಕಂಪನಿಯಿಂದ ಹಣ ಪಡೆದಿರುವ ಆರೋಪ ಎದುರಿಸುತ್ತಿರುವ ರಾಕೇಶ್ ಆಸ್ತಾನಾ ಅವರನ್ನು ಮೋದಿ ಸರ್ಕಾರ ಸಿಬಿಐ ನಿರ್ದೇಶಕ ಸ್ಥಾನಕ್ಕೆ ಆಯ್ಕೆ ಮಾಡಿದೆ.
  2. ಭಾರತದ ಬಹುತೇಕ ವಿದ್ಯುತ್ ಉತ್ಪಾದನಾ ಉದ್ದಿಮೆಗಳು ಕಲ್ಲಿದ್ದಲು ಮತ್ತು ಇತರ ಉಪಕರಣಗಳನ್ನು ಚೀನಾದಿಂದ ಖರೀದಿಸುತ್ತವೆ. ಈ ಉದ್ದಿಮೆಗಳು ಭಾರತದ ಉದ್ದಿಮೆಗಳಿಗೆ ಸರಕು ಸರಬರಾಜು ಮಾಡುವಾಗ ನಾನ್ನೂರು ಪಟ್ಟು ಹೆಚ್ಚಿನ ರಸೀದಿ ನೀಡುವ ಮೂಲಕ ಭಾರತ ಸರ್ಕಾರವನ್ನು ವಂಚಿಸುವುದು ಜನಜನಿತ ವಿಚಾರ. ಗೌತಮ್ ಅದಾನಿ ಉದ್ಯಮ ಸಮೂಹದ ವಿರುದ್ಧ ಇಂತಹ ಅರೋಪಗಳಿದ್ದರೂ ಮೋದಿ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ.
  3. ಸಿಂಗಪೂರಿನಲ್ಲಿರುವ ಭಾರತೀಯ ಹೈಕಮಿಷನರ್ ಭಾರತ ಸರ್ಕಾರಕ್ಕೆ ಪತ್ರವೊಂದನ್ನು ಬರೆದಿದ್ದು ಮುಖೇಶ್ ಅಂಬಾನಿಯ ಕಂಪನಿ ಸಿಂಗಪೂರದಲ್ಲಿ ಯಾವುದೇ ವಾಣಿಜ್ಯ ಚಟುವಟಿಕೆಯಲ್ಲಿ ತೊಡಗದೆ ಕಚೇರಿ ಹೊಂದಿರುವ ಬಯೋ ಮೆಟ್ರಿಕ್ಸ್ ಮಾರ್ಕೆಟಿಂಗ್ ಕಂಪನಿಗೆ 6530 ಕೋಟಿ ರೂ ರವಾನಿಸಿರುವುದನ್ನು ತಿಳಿಸಿದ್ದಾರೆ. ಈ ಹಣ ರಿಲೈಯನ್ಸ್ ಸಮೂಹದ ಕಂಪನಿಗಳಿಗೆ ಸೇರಿದೆ ಎಂದೂ ಹೇಳಲಾಗಿದೆ. ಆದರೆ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ.

4) 2ಜಿ ಹಗರಣದಲ್ಲಿ ಆರೋಪ ಎದುರಿಸಿದ್ದ ಸ್ವಾನ್ ಟೆಲಿಕಾಂ ಕಂಪನಿ ರಿಲೈಯನ್ಸ್ ಟೆಲಿಕಾಂ ಕಂಪನಿಯ ಸಹವರ್ತಿ ಕಂಪನಿ ಎಂದು ಸಿಬಿಐ ಖಾತರಿಪಡಿಸಿದೆ. ಈ ಸ್ವಾನ್ ಕಂಪನಿ ರಿಲೈಯನ್ಸಿಗೆ ಸೇರಿದ್ದಲ್ಲ ಎಂದು ನಿರೂಪಿಸಲು ಕಂಪನಿಯನ್ನು ಬಲ್ವಾ ಮತ್ತು ಗೋಯೆಂಕಾ ಕಂಪನಿಗೆ ಮಾರಾಟ ಮಾಡಲಾಯಿತು. ಈ ಅಕ್ರಮ ವ್ಯವಹಾರದ ಬಗ್ಗೆಯೂ ಮೋದಿ ಸರ್ಕಾರ ಮೌನವಹಿಸಿದೆ.

  1. ಭಾರತದಿಂದ ವಿದೇಶಗಳಿಗೆ ಅಕ್ರಮ ಬಂಡವಾಳದ ಹರಿವನ್ನು ತಡೆಗಟ್ಟುವ ಬದಲು ಮೋದಿ ಸರ್ಕಾರ ಹಲವಾರು ಕಠಿಣ ಕಾಯ್ದೆಗಳನ್ನು ಜಾರಿಗೊಳಿಸುವ ಮೂಲಕ ವಿದೇಶಿ ಕಂಪನಿಗಳು ಮತ್ತು ಕಾರ್ಪೊರೇಟ್ ಉದ್ದಿಮೆಗಳು ಭಾರತದ ರಾಜಕೀಯ ಪಕ್ಷಗಳಿಗೆ ಉದಾರವಾಗಿ ಹಣ ನೀಡಲು ಅವಕಾಶ ಮಾಡಿಕೊಟ್ಟಿದೆ.

ಈ ಸಂದರ್ಭದಲ್ಲಿ ಮೋದಿ ಸರ್ಕಾರ ಏಳು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಬೇಕಿದೆ. ಮೇಲೆ ಉಲ್ಲೇಖಿಸಿರುವ ಎಲ್ಲ ಪ್ರಕರಣಗಳಲ್ಲಿ ಪ್ರಾಮಾಣಿಕ ತನಿಖೆ ನಡೆಸುವುದು, ಕಪ್ಪುಹಣದ ಮಾಹಿತಿಯನ್ನು ಬಹಿರಂಗಪಡಿಸುವುದು, ಎಲ್ಲ ಚುನಾಯಿತ ಪ್ರತಿನಿಧಿಗಳ ಬ್ಯಾಂಕ್ ಠೇವಣಿ ಮತ್ತು ವ್ಯವಹಾರಗಳನ್ನು ಜನತೆಯ ಮುಂದಿಡುವುದು, ವಿಶೇಷ ತನಿಖಾ ದಳ ಕಪ್ಪುಹಣ ನಿಯಂತ್ರಣದ ಬಗ್ಗೆ ನೀಡಿರುವ ವರದಿಯನ್ನು ಜಾರಿಗೊಳಿಸುವುದು, ವಿದೇಶಿ ಕರೆನ್ಸಿ ನಿಯಂತ್ರಣ ಕಾಯ್ದೆಯ ತಿದ್ದುಪಡಿಯನ್ನು ಅನೂರ್ಜಿತಗೊಳಿಸುವುದು, ಎಲ್ಲ ಪ್ರಜೆಗಳೂ ತಮ್ಮ ವಿದೇಶಿ ಆಸ್ತಿಯನ್ನು ಘೋಷಿಸಲು ಆದೇಶಿಸುವುದು ಮತ್ತು ರಾಕೇಶ್ ಅಸ್ತಾನಾ ಅವರನ್ನು ಸಿಬಿಐನಿಂದ ಪದಚ್ಯುತಗೊಳಿಸುವುದು ಮೋದಿ ಸರ್ಕಾರದ ಆದ್ಯತೆಯಾಗಬೇಕಿದೆ.