ಆಳ್ವಾಸ್ ನ್ಯೂನ್ಯತೆ ತನಿಖೆಗೆ 7 ಸಮಿತಿ ರಚನೆ

ತಿಂಗಳೊಳಗೆ ವರದಿ ನೀಡಲು ಡೀಸಿ ಆದೇಶ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಕಾವ್ಯಾ ಪೂಜಾರಿ ನಿಗೂಢ ಸಾವಿನ ಕುರಿತಂತೆ ವಿಚಾರಣೆ ನಡೆಸಲು ಕಾಲೇಜಿಗೆ ಬಂದಿದ್ದ ಉಗ್ರಪ್ಪ ನೇತೃತ್ವದ ಮಹಿಳಾ ಮತ್ತು ಮಕ್ಕಳ ದೌರ್ಜನ್ಯ ತಡೆ ಸಮಿತಿ ನಿರ್ದೇಶನದಂತೆ ಇದೀಗ ಕಾಲೇಜಿನಲ್ಲಿ ಕಂಡುಬಂದಿರುವ ನ್ಯೂನತೆಗಳ ಬಗ್ಗೆ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಜಗದೀಶ್ 7 ಸಮಿತಿಗಳನ್ನು ರಚನೆ ಮಾಡಿದ್ದಾರೆ. ಇವುಗಳಲ್ಲಿ ಐದು ಸಮಿತಿಗಳನ್ನು ಆಳ್ವಾಸ್ ಸಂಸ್ಥೆಯಲ್ಲಿ ಕಂಡುಬಂದಿರುವ ನ್ಯೂನತೆಗಳ ಬಗ್ಗೆಯೇ ರಚಿಸಲಾಗಿದ್ದು, ಉಳಿದ ಎರಡು ಸಮಿತಿ ಉಳಿದ ವಿಚಾರಕ್ಕೆ ವರದಿ ನೀಡಲಿದೆ. ವರದಿ ಸಲ್ಲಿಕೆಗೆ ಒಂದು ತಿಂಗಳ ಗಡು ನೀಡಲಾಗಿದೆ.

  1. ಆಳ್ವಾಸ್ ಶಿಕ್ಷಣ ಸಂಸ್ಥೆ ವಿದ್ಯಾಸಂಸ್ಥೆಯನ್ನು ನಡೆಸಲು ಅನುಮತಿ ಪಡೆದುಕೊಂಡಿದೆ. ಆದರೆ ಕಾನೂನುಬಾಹಿರವಾಗಿ ಇಲ್ಲಿ ವಸತಿ ಶಾಲೆ ನಡೆಸುತ್ತಿದೆ. ವಸತಿ ಶಾಲೆ ನಡೆಸಬೇಕಾದರೆ ಪ್ರತ್ಯೇಕ ಅನುಮತಿ ಅಗತ್ಯವಿದೆ. ಆದರೆ ಈ ಅನುಮತಿಯನ್ನು ಶಿಕ್ಷಣ ಸಂಸ್ಥೆ ಪಡೆದುಕೊಂಡಿಲ್ಲ. ಇದು ಕಾನೂನುಬಾಹಿರ ಎಂದು ಖಚಿತಪಟ್ಟಿದ್ದು, ಸಾರ್ವಜನಿಕ ಶಿಕ್ಷಣ, ಪ ಪೂ ಶಿಕ್ಷಣ ಇಲಾಖೆ, ಕಾಲೇಜು ಶಿಕ್ಷಣ ಇಲಾಖೆ ಉಪನಿರ್ದೇಶಕರನ್ನೊಳಗೊಂಡ ಸಮಿತಿಯನ್ನು ರಚಿಸಲಾಗಿದ್ದು, ವರದಿ ನೀಡಲು ಸೂಚಿಸಲಾಗಿದೆ.
  2. ಶಿಕ್ಷಣ ಸಂಸ್ಥೆಗಾಗಿ ಬಹುಮಹಡಿ ಕಟ್ಟಡಗಳನ್ನು ನಿರ್ಮಿಸಲಾಗಿದ್ದು, ಇಲ್ಲಿ ಲಿಫ್ಟ್, ಸೆಟ್‍ಬ್ಯಾಕ್, ಕಟ್ಟಡದ ನಿರ್ವಹಣಾ ನಿಯಮಾವಳಿಗಳು, ಅಗ್ನಿಸುರಕ್ಷತೆ ಇತ್ಯಾದಿಗಳ ಉಲ್ಲಂಘನೆ ಕಂಡು ಬಂದಿದ್ದು, ಈ ನ್ಯೂನತೆಗಳ ತನಿಖೆಗಾಗಿ ಸಹಾಯಕ ನಿರ್ದೇಶಕರ, ಮುಖ್ಯ ಅಗ್ನಿಶಾಮಕ ಅಧಿಕಾರಿ, ತಾ ಪಂ, ಇಒ, ಮೂಡುಬಿದಿರೆ ಪುರಸಭೆ ಮುಖ್ಯಾಧಿಕಾರಿಗಳ ಸಮಿತಿಯನ್ನು ರಚಿಸಲಾಗಿದೆ.
  3. ಆಳ್ವಾಸ್ ಸಂಸ್ಥೆಗಳಲ್ಲಿ 26 ಸಾವಿರ ಮಂದಿ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಉಚಿತ ಶಿಕ್ಷಣ ನೀಡುವ ನೆಪದಲ್ಲಿ ಪ್ರತಿಯೊಬ್ಬರಿಂದ ವಾರ್ಷಿಕ 1 ಲಕ್ಷ ರೂ ಶುಲ್ಕ ಪಡೆಯಲಾಗುತ್ತಿದೆ. ಇದನ್ನು ಪರಿಶೀಲಿಸಲು ಮತ್ತು ವಿದ್ಯಾಸಂಸ್ಥೆ ನಡೆಸಲು ವಿಧಿಸಿರುವ 20 ಷರತ್ತುಗಳಲ್ಲಿ ಯಾವುದಾದರೂ ಷರತ್ತು ಉಲ್ಲಂಘನೆಯಾಗಿರುವ ಬಗ್ಗೆ ವರದಿ ನೀಡಲು ಮಂಗಳೂರು ವಿ ವಿ ರಿಜಿಸ್ಟ್ರಾರ್, ದ ಕ ಜಿ ಪಂ ಉಪಕಾರ್ಯದರ್ಶಿ, ಸಾರ್ವಜನಿಕ ಶಿಕ್ಷಣ ಇಲಾಖೆ ಸಮಿತಿ ರಚನೆ ಮಾಡಲಾಗಿದೆ.
  1. ನಾಲ್ಕು ಸಾವಿರಕ್ಕೂ ಅಧಿಕ ಉಪನ್ಯಾಸಕರು, ಸಿಬ್ಬಂದಿಗಳು ಕೆಲಸ ನಿರ್ವಹಿಸುತ್ತಿದ್ದರೂ ಸರಕಾರದ ಮಾನದಂಡದಂತೆ ಸಂಬಳವನ್ನು ನೀಡುತ್ತಿಲ್ಲ. ಈ ಬಗ್ಗೆ ಪರಿಶೀಲನೆ ನಡೆಸಲು ಸಹಾಯಕ ಕಾರ್ಮಿಕ ಆಯುಕ್ತರು, ಸಾರ್ವಜನಿಕ ಶಿಕ್ಷಣ ಇಲಾಖೆ, ಉಪನಿರ್ದೇಶಕರನ್ನೊಳಗೊಂಡ ಸಮಿತಿಯನ್ನೂ ರಚಿಸಲಾಗಿದೆ.
  2. ಶಿಕ್ಷಣ ಸಂಸ್ಥೆಯಲ್ಲಿ ಮಹಿಳೆಯರ ಮೇಲಾಗುವ ದೌರ್ಜನ್ಯಗಳನ್ನು ಆಲಿಸಲು ಲೈಂಗಿಕ ದೌರ್ಜನ್ಯ ತಡೆ ಸಮಿತಿಯನ್ನು ರಚಿಸಬೇಕಾದ ಅಗತ್ಯವಿದೆ. ಆದರೆ ಅಂಥ ಸಮಿತಿ ಆಳ್ವಾಸ್ ಸಂಸ್ಥೆಗಳಲ್ಲಿ ಇಲ್ಲ. ಆಂತರಿಕ ಮಹಿಳಾ ದೂರು ಸಮಿತಿ ರಚಿಸುವ ಕುರಿತು ಸಮಿತಿ ರಚಿಸಲು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೇ ಉಪನಿರ್ದೇಶಕರ ನೇತೃತ್ವದಲ್ಲಿ ಪ್ರತ್ಯೇಕ ಸಮಿತಿ ರಚನೆ ಮಾಡಲಾಗಿದೆ.

ಇನ್ನು ಎರಡು ಸಮಿತಿಗಳನ್ನು ಅಸಹಜ ಸಾವಿನ ಬಗ್ಗೆ ತನಿಖೆ ನಡೆಸಲು ಮತ್ತು ಮಕ್ಕಳ ಲಿಂಗಾನುಪಾತದಲ್ಲಿ ವ್ಯತ್ಯಾಸಕಂಡು ಬಂದಿರುವ ಹಿನ್ನೆಲೆಯಲ್ಲಿ ವೈಜ್ಞಾನಿಕ ಕಾರಣಗಳನ್ನು ಪತ್ತೆ ಹಚ್ಚಲು ಸಮಿತಿ ರಚಿಸಲಾಗಿದೆ.