ಟೆಂಪೋ-ಕ್ರೂಸರ್ ಡಿಕ್ಕಿ : ಏಳು ಮಂದಿ ಗಂಭೀರ

ನಮ್ಮ ಪ್ರತಿನಿಧಿ ವರದಿ

ಕುಮಟಾ : ತಾಲೂಕಿನ ಧಾರೇಶ್ವರದ ನಾಗತೀರ್ಥ ಬಳಿ ಮಂಗಳವಾರ ಕ್ರೂಸರ್ ಹಾಗೂ ಪ್ರಯಾಣಿಕರ ಟೆಂಪೋ ನಡುವೆ ಪರಸ್ಪರ ಡಿಕ್ಕಿ ಸಂಭವಿಸಿದ ಪರಿಣಾಮ 7 ಮಂದಿ ಗಂಭೀರ ಗಾಯಗೊಂಡರೆ, 9 ಮಂದಿ ಚಿಕ್ಕಪುಟ್ಟ ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕ್ರೂಸರಿನಲ್ಲಿದ್ದ ಸಾಗರದ ನಿವಾಸಿಗಳಾದ ಪರುಶುರಾಮ, ಶೃತಿ, ಕನಿಕಾ, ಶೀಲಾ, ಕೃಷ್ಣಪ್ಪ, ಜಾನಕಿ, ಹಾಲಮ್ಮ, ಸೀನಪ್ಪ, ರಷಿಕಾ, ಮಂಜಪ್ಪ, ಸಂತೋಷ, ನಾರಾಯಣಪ್ಪ ಹಾಗೂ ಪ್ರಯಾಣಿಕರ ಟೆಂಪೋದಲ್ಲಿ ಪ್ರಯಾಣಿಸುತ್ತಿದ್ದ ಕುಮಟಾ ನಿವಾಸಿಗಳಾದ ಗೋಪಾಲ ನಾಯ್ಕ, ಮೋಹನ ನಾಯ್ಕ, ಸಂಕೇತ ಪಟಗಾರ, ಜಯಶ್ರೀ ಪಟಗಾರ, ಕಮಲಾ ಪಟಗಾರ ಗಾಯಗೊಂಡವರು.

ಕ್ರೂಸರ್ ವಾಹನದಲ್ಲಿದ್ದ ಸಾಗರದ ನಿವಾಸಿಗಳು ಗೋಕರ್ಣದ ಮಹಾಬಲೇಶ್ವರನ ದರ್ಶನ ಪಡೆದು ಮುರ್ಡೇಶ್ವರಕ್ಕೆ ತೆರಳುತ್ತಿರುವ ಸಂದರ್ಭದಲ್ಲಿ ಹೊನ್ನಾವರದಿಂದ ಕುಮಟಾ ಕಡೆ ಬರುತ್ತಿದ್ದ ಪ್ರಯಾಣಿಕರ ಟೆಂಪೋ ನಡುವೆ ಅಪಘಾತ ನಡೆದಿದ್ದು, ಕ್ರೂಸರ್ ಚಾಲಕನ ಅತಿವೇಗ ಹಾಗೂ ನಿಷ್ಕಾಳಜಿತನದ ಚಾಲನೆಯಿಂದ ಈ ಅವಘಡ ಸಂಭವಿಸಿದೆ ಎಂದು ಹೇಳಲಾಗಿದೆ.