7 ಮಂದಿ ಬಂಧನ, ಚಿನ್ನಾಭರಣ ವಶ

ರೈಲಿನಲ್ಲಿ ಚಿನ್ನದ ವ್ಯಾಪಾರಿಯ ದರೋಡೆ ಪ್ರಕರಣ

ನಮ್ಮ ಪ್ರತಿನಿಧಿ ವರದಿ

ಉಡುಪಿ : ಮೂರು ತಿಂಗಳ ಹಿಂದೆ ಮುಂಬೈನಿಂದ ಕೇರಳಕ್ಕೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಚಿನ್ನದ ವ್ಯಾಪಾರಿ ರಾಜೇಂದ್ರ ಸಿಂಗ್ ಎಂಬಾತನನ್ನು ದರೋಡೆಗೈದ ಪ್ರಕರಣದ ಏಳು ಮಂದಿ ಆರೋಪಿಗಳನ್ನು ಕಾಪು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿಗಳು ರೈಲಿನೊಳಗೆ ರಾಜೇಂದ್ರನಿಗೆ ಪಿಸ್ತೂಲ್ ತೋರಿಸಿ,  ಚೂರಿಯಿಂದ ಇರಿದು 1.28 ಕೋಟಿ ರೂಪಾಯಿ ಮೌಲ್ಯದ 4.112 ಕೇಜಿ ತೂಕದ ಚಿನ್ನಾಭರಣ ದರೋಡೆ ನಡೆಸಿದ್ದರು.

ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಉಡುಪಿ ಎಸ್ಪಿ  ಸಂಜೀವ ಪಾಟೀಲ್, ಬಂಧಿತರು ಮಡಿಕೇರಿ ಮೂಲದ ಪ್ರಸ್ತುತ ಮಹಾರಾಷ್ಟ್ರದ ರಾಯಘಡ ಜಿಲ್ಲೆಯ ಮಿಥುನ್  ವಾಣಿಯನ್ (31), ಬಿಹಾರ ರಾಜ್ಯದ ಗಯಾ ಜಿಲ್ಲೆಯ ಪಿಂಟೋ ಅರ್ಜುನ್ ಚೌಧರಿ (32), ರಾಜಸ್ಥಾನದ ಉದಯಪುರ ಜಿಲ್ಲೆಯ ಯೋಗೀಶ್ವರ ಸಿಂಗ್ ರಾವ್ (24) ಮತ್ತು ಪ್ರಭುಲಾಲ್ ಗುರ್ಜಾರ್ (30) , ಕೇರಳ ಕಾಸರಗೋಡು ಉದುಮದ ಮುಖ್ತಾರ್ ಇಬ್ರಾಹಿಂ(24), ಕಾಸರಗೋಡು ಚೆಮ್ಮನಾಡುವಿನ ರಿಯಾಝ್ ಕೆ(30), ಕೇರಳ ತ್ರಿಶೂರಿನ ಪಿ ಕೆ ಮುರುಗನ್ (49) ಎಂದು ವಿವರಿಸಿದರು.

ಮಿಥುನ್ ಮತ್ತು ಪಿಂಟೋನನ್ನು ನವೆಂಬರ್ 21ರಂದು ಉಳ್ಳಾಲ ರೈಲು ನಿಲ್ದಾಣದಲ್ಲಿ ಬಂಧಿಸಲಾಗಿತ್ತು ಯೋಗೇಶ್ವರ್ ಸಿಂಗ್ ಮತ್ತು ಪ್ರಭುಲಾಲನನ್ನು ಡಿಸೆಂಬರ್ 3ರಂದು ಮುಂಬೈ ಗೋರೆಗಾಂವನಿಂದ ಮುಕ್ತಾರ್ ಮತ್ತು ರಿಯಾಝನನ್ನು ಮಂಗಳೂರಿನ ಪಂಪ್ವೆಲ್ ಬಳಿ ನವೆಂಬರ್ 17ರಂದು ಮತ್ತು ನವೆಂಬರ್ 23ರಂದು ತ್ರಿಶೂರು ಬಳಿಯಿಂದ ಮುರುಗನ್‍ನನ್ನು ಬಂಧಿಸಲಾಗಿತ್ತು ಎಂದು ವಿವರಿಸಿದರು.

ಪೊಲೀಸರು ಆರೋಪಿಗಳಿಂದ 31.8 ಲಕ್ಷ ರೂ ಮೌಲ್ಯದ 1.6 ಕೆಜಿ ಚಿನ್ನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಜೊತೆಗೆ ಎರಡು ಬುಲೆಟ್ಟುಗಳು, ಒಂದು ಕಂಟ್ರಿ ರಿವಾಲ್ವರ್, 10 ಸಾವಿರ ರೂ ಮೌಲ್ಯದ ಚಿನ್ನದ ಯಂತ್ರವನ್ನು ಕರಗಿಸುವ ಯಂತ್ರ, ಒಂದು ಹುಂಡೈ ಕಂಪೆನಿಯ ಐ 20 ಕಾರು, 6 ಮೊಬೈಲ್, ಒಂದು ಚಾಕು, 3720 ರೂಪಾಯಿ ನಗದು ಸಹಿತ 40,25,000 ರೂ ಮೌಲ್ಯ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಸೆಪ್ಟೆಂಬರ್ 18ರಂದು ಸುರತ್ಕಲ್ ಸಮೀಪ ರೈಲು ತಲುಪುತ್ತಿದ್ದಂತೆ ನಸುಕಿನ 6.35ರ ಸುಮಾರಿಗೆ ತಂಡವೊಂದು ಇವರಿದ್ದ ಬೋಗಿಯೊಳಗೆ ನುಗ್ಗಿ ಪಿಸ್ತೂಲ್ ತೋರಿಸಿ ಚೂರಿಯಿಂದ ಇರಿದು 4.112 ಕೆಜಿ ಚಿನ್ನಾಭರಣವನ್ನು ದರೋಡೆ ನಡೆಸಿತ್ತು. ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ 1.28 ಕೋಟಿ ರೂ ಮೌಲ್ಯದ ಚಿನ್ನಾಭರಣ ದೋಚಿದ ಪ್ರಕರಣ ದಾಖಲಿಸಲಾಗಿತ್ತು.