ಗಾಂಜಾ : 6 ಮಣಿಪಾಲ ವಿದ್ಯಾರ್ಥಿಗಳ ಬಂಧನ

ಸಾಂದರ್ಭಿಕ ಚಿತ್ರ

ಮಣಿಪಾಲ : ಮಣಿಪಾಲ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಗಾಂಜಾ ಸೇವನೆ ನಿರತರಾಗಿದ್ದ ಮಲೇಶಿಯಾದ ಫಿಶಿಯೋಥೆರಪಿ ವಿಭಾಗದ ವಿದ್ಯಾರ್ಥಿ ಸಹಿತ ಒಟ್ಟು ಆರು ಮಂದಿ ವಿದ್ಯಾರ್ಥಿಗಳನ್ನು ಉಡುಪಿ ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ.

ಸಾತ್ವಿಕ್ ಮೋಹನ್ (21), ರಾಘವ್ ತನೇಜಾ (22), ಶಿವಾಂಖ್ ಶೇಖರ್ (21), ಸುಯೇಶ್ ಸಿಂಗ್ (20), ಮಾಧವ ಛಾವನ್ (20) ಮತ್ತು ಮಲೇಶಿಯಾದ ವಿದ್ಯಾರ್ಥಿ ನವರೇತ್ ಖೌರ್(25)ನನ್ನು ಬಂಧಿಸಲಾಗಿದೆ.

ಮಣಿಪಾಲದ ಅಪಾರ್ಟಮೆಂಟಿನ ವಿವಿಧ ಬ್ಲಾಕುಗಳಲ್ಲಿ ಇದ್ದ ವಿದ್ಯಾರ್ಥಿಗಳನ್ನು ಪೊಲೀಸರು ಕಾರ್ಯಾಚರಣೆ ಮೂಲಕ ಬಂಧಿಸಿದ್ದಾರೆ. ಇವರೆಲ್ಲರನ್ನೂ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು, ಗಾಂಜಾ ಸೇವನೆ ಖಚಿತಪಟ್ಟ ಹಿನ್ನೆಲೆಯಲ್ಲಿ ಸೆಕ್ಷನ್ 21(ಬಿ) ಎನ್‍ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಉಡುಪಿ ಪೊಲೀಸ್ ವರಿಷ್ಠಾಧಿಕಾರಿ ಸÀಂಜೀವ್ ಪಾಟೀಲ್ ಹೇಳಿದ್ದಾರೆ.ಬಂಧಿತ ವಿದ್ಯಾರ್ಥಿಗಳ ಪೋಷಕರನ್ನು ಕರೆಸಿ ಅವರಿಗೆ ಅಮಲು ಪದಾರ್ಥ ದಾಸರಾಗಿದ್ದಾರೆ ಎನ್ನುವ ಮಾಹಿತಿ ನೀಡಲಾಯಿತು.“ಮಣಿಪಾಲದಲ್ಲಿ ಡ್ರಗ್ಸ್ ಸೇವನೆ ಮಾಡುವರು ಹೆಚ್ಚಾಗಿದ್ದಾರೆ. ಈ ವಿದ್ಯಾರ್ಥಿಗಳು ತಾವು ಕೆಡುವುದಲ್ಲದೇ ಅನ್ಯ ವಿದ್ಯಾರ್ಥಿಗಳನ್ನೂ ಹಾಳು ಮಾಡುತ್ತಿದ್ದಾರೆ. ಇದನ್ನು ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ನಾವು ಯತ್ನಿಸುತ್ತಿದ್ದೇವೆ. ಗಾಂಜಾ ಪತ್ತೆ ಹಚ್ಚಲು ನಾವು ಪ್ರತ್ಯೇಕ ತನಿಖಾ ತಂಡವೊಂದನ್ನು ರಚನೆ ಮಾಡಲಿದ್ದೇವೆ. ಮಣಿಪಾಲವನ್ನು ಅಮಲುಮುಕ್ತ ನಗರವನ್ನಾಗಿ ಮಾಡುವುದು ನಮ್ಮ ದ್ಯೇಯವಾಗಿದೆ” ಎಂದು ಎಸ್ಪಿ ಪಾಟೀಲ್ ಹೇಳಿದ್ದಾರೆ.