ಕಾರವಾರ ಬಳಿ ಜಲಪಾತದಲ್ಲಿ ಪ್ರವಾಹಕ್ಕೆ ಸಿಕ್ಕಿ 6 ಗೋವಾದ ಪ್ರವಾಸಿಗರ ದಾರುಣ ಸಾವು

ನಮ್ಮ ಪ್ರತಿನಿಧಿ ವರದಿ

ಕಾರವಾರ : ಸಂಡೇ ರಜೆಯ ಮೋಜಿಗಾಗಿ ಗೋವಾದ ಮಡಗಾಂನಿಂದ ಕಾರವಾರದ ನಾಗರಮಡಿ ಜಲಪಾತಕ್ಕೆ ಪ್ರವಾಸಕ್ಕೆ ಆಗಮಿಸಿದ್ದ 6 ಜನ ಧಿಡೀರಾಗಿ ಉಂಟಾದ ಕ್ಷಿಪ್ರ ಪ್ರವಾಹದಲ್ಲಿ ಸಿಲುಕಿ ಕೊಚ್ಚಿಕೊಂಡು ಹೋಗಿದ್ದು, ಇಬ್ಬರ ಮೃತ ದೇಹಗಳು ಪತ್ತೆಯಾಗಿರುವುದರಿಂದ ಇವರ ಪಾಲಿಗೆ ಭಾನುವಾರ `ಬ್ಲ್ಯಾಕ್ ಸಂಡೆ’ಯಾಗಿ ಪರಿಣಮಿಸಿದೆ.

ಕಾರವಾರದ ಚೆಂಡಿಯಾ ಬಳಿ ರಾಷ್ಟ್ರೀಯ ಹೆದ್ದಾರಿಯಿಂದ ಸುಮರು 2 ಕಿಲೋಮಿಟರ ದೂರದಲ್ಲಿ ದಟ್ಟಕಾಡಿನಲ್ಲಿ ಇರುವ ನಾಗರಮಡಿ ಜಲಪಾತಕ್ಕೆ ಕಾರವಾರ ಜನರಿಗಿಂತಲೂ ಗೋವಾದ ಜನರೇ ಹೆಚ್ಚಾಗಿ ಬರುತ್ತಿದ್ದಾರೆ. ಕಾಡಿನಲ್ಲಿ ಹರಿಯುವ ಚಿಕ್ಕ ಹಳ್ಳವೊಂದು ನಾಗರಮಡಿಯಲ್ಲಿ ಜಲಪಾತವಾಗಿ ಮುಂದೆ ಚೆಂಡಿಯಾದ ಮೂಲಕ ಅರಬ್ಬಿ ಸಮುದ್ರವನ್ನು ಸೇರುತ್ತದೆ. ಇದು ಹತ್ತಿರದಲ್ಲೇ ಇರುವ ಸೀಬರ್ಡ ಸಿಬ್ಬಂದಿಗಳ ಕುಟುಂಬಕ್ಕೂ ಉತ್ತಮ ಪಿಕ್ನಿಕ್ ತಾಣವಾಗಿದೆ. ದಟ್ಟಕಾಡಿನಲ್ಲಿರುವ ಈ ಜಲಪಾತ ಮೋಜು ಮಸ್ತಿಗೆ ಹಾಗೂ ಏಕಾಂತಕ್ಕೆ ತಕ್ಕ ತಾಣವಾಗಿರುವ ಹಿನ್ನಲೆಯಲ್ಲಿ ಜನ ಇಲ್ಲಿಗೆ ಬರುವುದು ಸಾಮಾನ್ಯವಾಗಿದೆ. ರವಿವಾರ ಈ ಭಾಗಕ್ಕೆ ಸುಮಾರು 100ಕ್ಕಿಂತಲೂ ಹೆಚ್ಚು ಪ್ರವಾಸಿಗರು ಗೋವಾದ ಕಡೆಯಿಂದ ಬೇರೆ ಬೇರೆ ಗುಂಪುಗಳಲ್ಲಿ ಆಗಮಿಸಿದ್ದರು.ಅವರಲ್ಲಿ ಹಲವರು ಈ ಜಲಪಾತದ ಅಡಿಯಲ್ಲಿ ಈಜಾಡುತ್ತಿದ್ದರು ಎನ್ನಲಾಗಿದೆ.

ಮಧ್ಯಾನ್ಹ ಸುಮಾರು 12 ಗಂಟೆಯ ಹೊತ್ತಿಗೆ ಕಾರವಾರದ ಸುತ್ತಮುತ್ತ ಭಾರಿ ಪ್ರಮಾಣದಲ್ಲಿ ಮಳೆಯಾಗಿದೆ. ಆದರೆ ಮಳೆಯಲ್ಲಿ ನೀರಿನಲ್ಲಿ ಇಳಿದು ಮೋಜು ಮಾಡುತ್ತಿದ್ದ ಪ್ರವಾಸಿಗರಿಗೆ ಅಲ್ಲಿಯೇ ಜವರಾಯ ಹೊಂಚು ಹಾಕಿದ್ದು ತಿಳಿಯಲೇ ಇಲ್ಲ. ಕಾಡಿನ ಪ್ರದೇಶದಲ್ಲಿ ಭಾರಿ ಮಳೆಯಾದ ಹಿನ್ನಲೆಯಲ್ಲಿ ಹಳ್ಳದಲ್ಲಿ ಭಾರಿ ನೀರು ಹರಿದುಬಂದು ಆಕಸ್ಮಿಕ ಕ್ಷಿಪ್ರ ಪ್ರವಾಹವುಂಟಾಗಿದೆ. ಕೆಲವೇ ಕ್ಷಣಗಳಲ್ಲಿ ಜಲಪಾತದ ಕೆಳಗೆ ಸುಮಾರು 10 ಅಡಿಯಷ್ಟು ನೀರು ಬಂದಿದ್ದು ಏಕಾಏಕಿ ನೀರಿನ ಮಟ್ಟ ಏರಿಕೆಯಾಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಏನಾಗುತ್ತಿದೆ ಎಂದು ಅರಿವಾಗುವಷ್ಟರಲ್ಲಿ ಗೋವಾದ ಮಡಗಾಂವ್ ಸಮೀಪದ ರಾಯಾ ಗ್ರಾಮದ ಫ್ರಾನ್ಸಿಲಾ ಪೆರಿಸ್ (21), ಫಿಯಾನ ಪಚಾವೊ (28), ರೇಣುಕಾ (23), ಕುಟ್ಟಾಲಿ ಗ್ರಾಮದ ಮಾರ್ಸಲಿನಾ ಎಸ್ಟೆಬಿಯೊ (38), ಪೆÇೀಂಡಾದ ಸಮೀರ ಗಾವಡೆ (28) ವಾಸ್ಕೋದ ಸಿದ್ದು ಚಾರಿ (22) ಎಂಬುವವರು ನೀರಿನಲ್ಲಿ ತೇಲಿ ಹೋಗಿದ್ದಾರೆ. ಇವರಲ್ಲಿ ಗಿಡಗಂಟಿಗಳಲ್ಲಿ ಸಿಕ್ಕಿಹಾಕಿಕೊಂಡಿದ್ದ ಪ್ರೆಸಿಲ್ಲಾ ಹಾಗೂ ಫಿಯಾನಾರ ಶವ ಪತ್ತೆಯಾಗಿದೆ.

ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಪೆÇಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಗೆ  ಇಳಿಯಿತಾದರೂ ಅರಣ್ಯಪ್ರದೇಶದಲ್ಲಿ ಬೀಳುತ್ತಿದ್ದ ಭಾರಿ ಮಳೆ ಕಾರ್ಯಾಚರಣೆಗೆ ಅಡ್ಡಿಯಾಯಿತು. ಸುತ್ತಮುತ್ತಲ ಗ್ರಾಮಸ್ಥರೂ ಸ್ಥಳಕ್ಕೆ ಆಗಮಿಸಿ ರಕ್ಷಣಾ ಸಿಬ್ಬಂದಿಗಳಿಗೆ ಸಹಾಯ ಮಾಡಿದರು.

ರವಿವಾರ ರಾತ್ರಿ ಈ ರಕ್ಷಣಾ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದ್ದು ಸೋಮವಾರ ಮತ್ತೆ ಮುಂದುವರೆಸಿದ್ದಾರೆ. ಈ ಮಧ್ಯೆ ಗೋವಾದ ಚರ್ಚೊಲಿಂ ಕ್ಷೇತ್ರದ ಶಾಸಕ ಅಲೆಕ್ಸ್ ರೆಜೆನಾಲ್ಡ್ ರವಿವಾರ ಸಂಜೆ ಕಾರವಾರಕ್ಕೆ ಆಗಮಿಸಿದರು.

ಪತ್ತೆಯಾದ ಪ್ರಸಿಲ್ಲಾ ಹಾಗೂ ಫಿಯಾನಾರ ಶವಗಳನ್ನು ನಗರದ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಪೆÇೀಸ್ಟ್ ಮಾರ್ಟಂಗಾಗಿ ಸಾಗಿಸಲಾಗಿದೆ.

ಕಾರವಾರಕ್ಕೆ ಗೋವಾ ಪ್ರವಾಸಿಗರ ಹೆಚ್ಚಳ

ಜಗತ್ತಿನ ಜನರೆಲ್ಲ ಮೋಜು ಮಸ್ತಿಗಾಗಿ ಗೋವಾಕ್ಕೆ ಧಾವಿಸಿದರೆ ಗೋವಾದ ಜನ ರಜಾದಿನಗಳಲ್ಲಿ ಕಾರವಾರದತ್ತ ಹರಿದುಬರುತ್ತಾರೆ. ತರಕಾರಿ-ಮೀನು ಖರೀದಿಗೆ ಆಗಮಿಸುವವರು, ಕಾರವಾರದ ಹೊmಲುಗಳಲ್ಲಿ ನಾನ್-ವೆಜ್ ಸವಿಯಲು ಬರುವವರು ಹಾಗೂ ಕಾರವಾರದ ಸುತ್ತಲಿನ ಪ್ರವಾಸಿ ತಾಣಗಳಿಗೆ ಬರುವ ಗೋವನ್ನರ ಸಂಖ್ಯೆ ಈಗ ಗಣನೀಯವಾಗಿ ಏರಿಕೆಯಾಗುತ್ತಿದೆ. ಅದರಲ್ಲೂ ನಾಗರಮಡಿ ಜಲಪಾತ ಗೋವನ್ನರ ಪಾಲಿಗೆ ಕ್ರೇಜ್ ಆಗಿದ್ದು ದೂರದ ಪಣಜಿಯಿಂದಲೂ ಇಲ್ಲಿಗೆ ಪ್ರವಾಸಕ್ಕೆ ಬಂದು ಸಾವನ್ನು ಕಂಡಿದ್ದಾರೆ.

ನಾಗರಮಡಿ ಜಲಪಾತ ಈಗ ಗೋವಾದ ಜನರಪಾಲಿಗೆ ಸಾವಿನ ಜಲಪಾತವಾಗಿ ಪರಿಣಮಿಸಿದೆ. ಕಳೆದ ವರ್ಷ ಜುಲೈ ತಿಂಗಳಲ್ಲಿ ಗೋವಾದ ಮಡಗಾಂವನಿಂದ ನಾಗರಮಡಿ ಪ್ರವಾಸಕ್ಕೆ ಆಗಮಿಸಿದ್ದ 10 ಜನರ ತಂಡ ಈ ಹಳ್ಳದಲ್ಲಿ ಏಕಾಏಕಿ ಮಳೆಯಿಂದ ಪ್ರವಾಹ ಉಂಟಾದ ಹಿನ್ನಲೆಯಲ್ಲಿ ಕಾಡಿನಲ್ಲಿ ದಿಕ್ಕು ತಪ್ಪಿತ್ತು. ಅದೃಷ್ಟವಶಾತ್ ಅಲ್ಲಿ ಮೊಬೈಲ್ ಸಿಗ್ನಲ್ ದೊರೆತದ್ದರಿಂದ ಅವರು ಗೋವಾದ ಪೆÇಲೀಸ್ ಕಂಟ್ರೋಲ್ ರೂಮಿಗೆ ಕರೆಮಾಡಿ ತಾವು ನಾಗರಮಡಿ ಹಳ್ಳದ ಬಳಿ ಸಿಕ್ಕಿಕೊಂಡಬಗ್ಗೆ ತಿಳಿಸಿದ್ದರು. ಗೋವಾದ ಪೆÇಲೀಸರು ಕಾರವಾರದ ಪೆÇೀಲಿಸರಿಗೆ ಸಕಾಲದಲ್ಲಿ ವಿಷಯ ತಿಳಿಸಿದ್ದರಿಂದ ಕಾರವಾರದ ಪೆÇಲೀಸ್ ಹಾಗೂ ಅಗ್ನಿಶಾಮಕ ದಳದವರು

ಅಲ್ಲಿಗೆ ಧಾವಿಸಿ ಮಳೆಯಲ್ಲೇ ಕಾರ್ಯಾಚರಣೆ ನಡೆಸಿ ಈ ಜನರನ್ನು ರಕ್ಷಿಸಿದ್ದರು. ಅದಾದ ಒಂದೇ ತಿಂಗಳಿಗೆ ಗೋವಾದ ಪಣಜಿಯ ನಿಕ್ಸ್ ಫರ್ನಾಂಡಿಸ್ (16) ಎಂಬ ಯುವಕ ನಾಗರಮಡಿ ಜಲಪಾತದಲ್ಲಿ ಮುಳುಗಿ ಸಾವನ್ನಪ್ಪಿದ್ದ.

ಪ್ರವಾಸಕ್ಕೆ ಬರುವ ಜನ ಸ್ಥಳೀಯ ಪೆÇಲೀಸರಿಗೆ ಹಾಗೂ ಸಾರ್ವಜನಿಕರಿಗೆ ವಿಷಯ ತಿಳಿಸದೇ ತಮ್ಮಷ್ಟಕ್ಕೆ  ತಾವೇ ಕಾಡಿನಲ್ಲಿ ಹೋಗುತ್ತಿರುವ ಹಿನ್ನೆಲೆಯಲ್ಲಿ ಈ ಅನಾಹುತಗಳು ಸಂಭವಿಸುತ್ತಿವೆ ಎಂದು ಪೆÇಲೀಸ್ ಅಧಿಕಾರಿಗಳು ತಿಳಿಸುತ್ತಾರೆ.