ಹಣ್ಣಿನ ವ್ಯಾಪಾರಿ ಕಸ್ಟಡಿ ಡೆತ್ : ಆರು ಪೊಲೀಸರು ಅಮಾನತು

ನವದೆಹಲಿ : ಪೊಲೀಸ್ ಕಸ್ಟಡಿಯಲ್ಲಿ ಹಣ್ಣಿನ ವ್ಯಾಪಾರಿಯೊಬ್ಬರನ್ನು ಕೊಲೆಗೈದು, ಸಾಕ್ಷ್ಯಿ ನಾಶ ಉದ್ದೇಶದಿಂದ ಶವವನ್ನು ನಿರ್ಜನ ಉದ್ಯಾನವೊಂದರಲ್ಲಿ ಎಸೆಯಲಾದ ಆರೋಪದಲ್ಲಿ ಇಲ್ಲಿನ ಐವರು ಪೊಲೀಸರು ಹಾಗೂ ಓರ್ವ ಸ್ಟೇಷನ್ ಹೌಸ್ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ.

ಆದರ್ಶನನಗರ ಠಾಣೆಯ ಎಸ್ ಎಚ್ ಒ ಮತ್ತು ಇತರ ಐವರು ಪೊಲೀಸರು ಕೊಲೆ ನಡೆಸಲಾದ ಸ್ಥಳದಲ್ಲಿ ಚೆಲ್ಲಿದ್ದ ರಕ್ತ ಒರಸಿರುವುದಲ್ಲದೆ, ಇತರ ಸಾಕ್ಷ್ಯಿಗಳನ್ನು ನಾಶ ಮಾಡಿದ್ದರು.

ಸದ್ರಿ ಠಾಣೆಯ ಮಾಹಿತಿದಾರರೊಬ್ಬರು ಈ ಘಟನೆ ಬಗ್ಗೆ ಮೋಡೆಲ್ ಟೌನ್ ಪೊಲೀಸ್ ಉಪ-ವಿಭಾಗದ ಎಸಿಪಿಗೆ ದೂರು ನೀಡಿದ್ದರು. ಬಳಿಕ ವಾಯುವ್ಯ ಡಿಸಿಪಿ ಹಾಗೂ ಇತರ ಹಿರಿಯ ಪೊಲೀಸರಿಗೆ ದೂರು ಸಲ್ಲಿಕೆಯಾಗಿದೆ.

ಪ್ರಾಥಮಿಕ ತನಿಖೆ ಬಳಿಕ ಆರು ಮಂದಿ ಪೊಲೀಸರನ್ನು ಅಮಾನತುಗೊಳಿಸಿ, ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ. ಆರೋಪಿಗಳ ವಿರುದ್ಧ ಹಲವು ಅಪರಾಧ ಕಾಯ್ದೆಯನ್ವಯ ಪ್ರಕರಣ ದಾಖಲಿಸಲಾಗಿದೆ.

ಪೊಲೀಸರಿಂದ ಕೊಲೆಗೈಯಲ್ಪಟ್ಟ ಹಣ್ಣು ವ್ಯಾಪಾರಿ, ಆಜಾದಪುರದ ನಿವಾಸಿ ಸೋಮಪಾಲ್ ಎಂದು ಗುರುತಿಸಲಾಗಿದೆ. ಜಗಳವೊಂದಕ್ಕೆ ಸಂಬಂಧಿಸಿ ಡಿ 28ರಂದು ಈತನನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿತ್ತು. ಅಂದು ರಾತ್ರಿ ಸೋಮಪಾಲನಿಗೆ ಪೊಲೀಸರು ಚಿತ್ರಹಿಂಸೆ ನೀಡಿದ್ದರು. ಅದೇ ದಿನ ಮೃತಪಟ್ಟಿದ್ದ ಈತನ ಶವವನ್ನು ಎಸ್ ಎಚ್ ಒ ಸಂಜಯ್, ಕುಲ್ದೀಪ್, ಸುರೇಂದ್ರ, ಇಂದ್ರಾಜ್ ಮತ್ತು ಸುಲೇಂದ್ರ ಸೇರಿ ಡಂಪ್ ಮಾಡಿದ್ದು, ಮರುದಿನ ಶವ ಪತ್ತೆಯಾಗಿತ್ತು. ಈತನ ವಿರುದ್ಧ ಕಳ್ಳತನ ಕೇಸು ದಾಖಲಿಸಿ, ಪ್ರಕರಣ ಮುಚ್ಚಿ ಹಾಕಲು ಪ್ರಯತ್ನಿಸಿದ್ದರು.