ಪಿಲಿಕುಳ ಮತ್ಸೊ ್ಯೀತ್ಸವದಲ್ಲಿ 500 ಕೇಜಿ ಮೀನು ಮಾರಾಟ

ಒಂದೇ ದಿನದಲ್ಲಿ ಲಕ್ಷಾಂತರ ರೂ ಆದಾಯ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಪಿಲಿಕುಳ ಶಿವರಾಮ ಕಾರಂತ ನಿಸರ್ಗಧಾಮದ ಕೆರೆಯಿಂದ ಭಾನುವಾರ ಸುಮಾರು 500 ಕೇಜಿ ಮೀನು ಹಿಡಿದು ಮಾರಾಟ ಮಾಡಲಾಗಿದೆ. ಹರಾಜು ಪ್ರಕ್ರಿಯೆ ನಡೆಸಿದಾಗ ಸುಮಾರು 55,000 ರೂ ಆದಾಯ ಸಂಗ್ರಹವಾಗಿದೆ.

ಪಿಲಿಕುಳದಲ್ಲಿ ಭಾನುವಾರ ಮತ್ಸ್ಯೋತ್ಸವ ಮತ್ತು ಕ್ಷೇತ್ರೋತ್ಸವ ಕಾರ್ಯಕ್ರಮ ನಡೆಯಿತು. ಇಲ್ಲಿ ಹಿಡಿದ ಮೀನು ಕೂಡಾ ಒಂದೊಂದು ಸುಮಾರು ಒಂದು ಕೇಜಿಯಿಂದ 10-11 ಕೇಜಿಯವರೆಗೆ ತೂಕವಿದ್ದವು. ಸ್ಥಳೀಯರು ಬಹಳ ಆಸಕ್ತಿಯಿಂದಲೇ ಹರಾಜಿನಲ್ಲಿ ಭಾಗವಹಿಸಿ ಮೀನುಗಳನ್ನು ಖರೀದಿಸಿದರು. 4 ಗಂಟೆಯಷ್ಟು ಹೊತ್ತಿಗೆ ಮೀನು ಹರಾಜು ಪೂರ್ಣಗೊಂಡಿತ್ತು. ಜೊತೆಗೆ ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ವತಿಯಿಂದಲೂ ಕಡಲ ಮೀನುಗಳ ಮಾರಾಟ ಹಾಗೂ ಮೀನುಗಳ ರುಚಿಕರ ಆಹಾರ ಖಾದ್ಯ ಮಾರಾಟದಿಂದ ಒಂದು ಲಕ್ಷ ರೂಪಾಯಿಗೂ ಹೆಚ್ಚು ಆದಾಯ ಇಂದು ಸರಕಾರದ ಬೊಕ್ಕಸಕ್ಕೆ ಬಂದಿದೆ. ಸುಮಾರು 6000ದಷ್ಟು ಮಂದಿ ಮತ್ಸ್ಯೋತ್ಸದಲ್ಲಿ ಪಾಲ್ಗೊಂಡರು ಎಂದು ನಿಸರ್ಗಧಾಮದ ಕಾರ್ಯನಿರ್ವಾಹಕ ನಿರ್ದೇಶಕ ಪ್ರಸನ್ನ ತಿಳಿಸಿದರು.

ಮತ್ಸ್ಯ ಅಭಿವೃದ್ಧಿ ಯೋಜನೆಯಡಿಯಲ್ಲಿ ಸರಕಾರದಿಂದ ಪಿಲಿಕುಳದಲ್ಲಿ ಮತ್ಸ್ಯೋದ್ಯಮ ಅಭಿವೃದ್ಧಿಗೆ 20 ಕೋಟಿ ರೂ ಯೋಜನೆಗೆ ಮಂಜೂರಾತಿ ಸಿಕ್ಕಿದ್ದು, ಅದರಲ್ಲಿ 10 ಕೋಟಿ ರೂ.ಗಳನ್ನು ಬಿಡುಗಡೆ ಕೂಡಾ ಮಾಡಲಾಗಿದೆ ಎಂದು ಮತ್ಸ್ಯೋತ್ಸವನ್ನು ಉದ್ಘಾಟಿಸಿದ ರಾಜ್ಯ ಮೀನುಗಾರಿಕೆ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.