ವಿಟ್ಲ ರಸ್ತೆಯಲ್ಲಿ 500, 1000 ರೂ ನೋಟು ಚೆಲ್ಲಾಪಿಲ್ಲಿ

ನಮ್ಮ ಪ್ರತಿನಿಧಿ ವರದಿ

ವಿಟ್ಲ : ನೋಟು ನಿಷೇಧವಾದ ಹತ್ತು ದಿನದಲ್ಲೇ ಬೇಕಾಬಿಟ್ಟಿಯಾಗಿ 500 ಮತ್ತು 1000 ರೂ ಮುಖಬೆಲೆಯ ನೋಟುಗಳು ಭಾನುವಾರ ವಿಟ್ಲ ಸಮೀಪ ರಸ್ತೆ ಬದಿಯಲ್ಲಿ ಪತ್ತೆಯಾಗಿದ್ದು, ಕೈಗೆ ಸಿಕ್ಕಿದ್ದನ್ನು ಬಾಚಿಕೊಂಡು ಕೆಲವರು ಅದೃಷ್ಟವಂತರಾಗಿದ್ದಾರೆ.

ವಿಟ್ಲ-ಕಬಕ ರಸ್ತೆಯ ಬದನಾಜೆಯಿಂದ ಕಂಬಳೆಬೆಟ್ಟು ಸೇತುವೆಯ ತನಕ ನಿಷೇಧಿತ ನೋಟುಗಳ ಮಳೆ ಸುರಿದಿರುವ ಕಾರಣ ಸಾರ್ವಜನಿಕರು ಆಶ್ಚರ್ಯಕ್ಕೀಡಾಗಿದ್ದಾರೆ. ಭಾನುವಾರ ಬೆಳಗ್ಗೆ 11 ಗಂಟೆ ಬಳಿಕ ಸಂಚರಿಸಿದ್ದ ಬಸ್ಸಿನ ಚಾಲಕ ಬದಿಯ ಸೀಟಿನಲ್ಲಿದ್ದ ವ್ಯಕ್ತಿಯೊಬ್ಬ ನೋಟಿನ ಮಳೆ ಹರಿಸಿದ್ದಾನೆಂಬ ಮಾಹಿತಿ ಲಭ್ಯವಾಗಿದೆ. ರಸ್ತೆಯುದ್ದಕ್ಕೂ 500 ಮತ್ತು 1000 ರೂಪಾಯಿಗಳ ನೋಟು ಬಿದ್ದಿರುವ ಬಗ್ಗೆ ಮಾಹಿತಿ ಸಿಕ್ಕಿದ ಹಲವರು ಕೈಗೆ ಸಿಕ್ಕಿದಷ್ಟು ಬಾಚಿ ಅದೃಷ್ಟವಂತರಾಗಿದ್ದಾರೆ. ಕೆಲ ವ್ಯಕ್ತಿಗಳಿಗೆ ನಾಲ್ಕು ಸಾವಿರ ದಕ್ಕಿದರೆ ಮತ್ತೆ ಕೆಲವರಿಗೆ ಐದು ಸಾವಿರದಷ್ಟು ದೊರೆತಿದ್ದು ಅಂತೂ ನೋಟು ಹೆಕ್ಕಿಕೊಂಡವರು ಡಿಸೆಂಬರ್ 30ವರೆಗೂ ಇದೇ ರೀತಿ ಸಿಗುವಂತಾಗಲಿ ಎಂದು ದೇವರಲ್ಲಿ ಬೇಡಿಕೊಂಡಿದ್ದಾರೆನ್ನಲಾಗಿದೆ.

ನೋಟುಗಳ ಮಳೆ ಸುರಿಯುತ್ತಿದೆಯೆಂಬ ಮಾಹಿತಿ ಪಡೆದ ವಿಟ್ಲ ಪೊಲೀಸರು ಸ್ಥಳಕ್ಕಾಗಮಿಸಿದ್ದರೂ ಅಷ್ಟರಲ್ಲಾಗಲೇ ಬಿದ್ದ ನೋಟುಗಳು ಅದೃಷ್ಟವಂತರ ಕೈ ಸೇರಿತ್ತೆನ್ನಲಾಗಿದೆ. ಅಂತೂ ಈವರೆಗೂ ಹೊಟ್ಟೆ ಬಾಯಿ ಕಟ್ಟಿ ಗಂಟು ಹಾಕಿದ್ದ ಕೆಲ ಜಿಪುಣರು ನೋಟು ನಿಷೇಧದಿಂದಾಗಿ ಇನ್ನಷ್ಟು ಸೊರಗುವಂತಾಗಿದೆ.