ರಾಜ್ಯ ಹೈಕೋರ್ಟಲ್ಲಿ ಶೇ 50 ನ್ಯಾಯಾಧೀಶರ ಹುದ್ದೆ ಖಾಲಿ

ಬೆಂಗಳೂರು : ಅರ್ಧಕ್ಕಿಂತಲೂ ಹೆಚ್ಚು ನ್ಯಾಯಾಧೀಶರ ಹುದ್ದೆ ಖಾಲಿ ಹೊಂದಿರುವ ರಾಜ್ಯ ಹೈಕೋರ್ಟ್ ಮೊಕದ್ದಮೆಗಳನ್ನು ಸಮರ್ಥವಾಗಿ ನಿರ್ವಹಿಸಲಾರದೆ ಪರದಾಡುತ್ತಿದೆ. ಒಟ್ಟು 62 ನ್ಯಾಯಾಧೀಶರು ಇರಬೇಕಾದ ಹೈಕೋರ್ಟಿನಲ್ಲಿ 37 ಹುದ್ದೆಗಳು ಖಾಲಿ ಇರುವುದಾಗಿ ಹೈಕೋರ್ಟ್ ಮೂಲಗಳು ತಿಳಿಸಿದ್ದು, ಇದರಿಂದ ಹಾಲಿ ನ್ಯಾಯಾಧೀಶರಿಗೆ ಕೆಲಸದ ಒತ್ತಡವೂ ಹೆಚ್ಚಾಗಿದೆ ಎಂದು ಹೇಳಲಾಗಿದೆ.

ಹಲವಾರು ಮೊಕದ್ದಮೆಗಳ ವಿಲೇವಾರಿಯಲ್ಲಿ ವಿಳಂಬವಾಗಿರುವುದರಿಂದ ನ್ಯಾಯಾಲಯದ ಹಲವು ಕೋಣೆಗಳಲ್ಲಿ ಮೊಕದ್ದಮೆಗಳ ದಾಖಲೆಗಳ ರಾಶಿ ತುಂಬಲಾಗಿದೆ. ರಾಜ್ಯ ಹೈಕೋರ್ಟಿನಲ್ಲಿ 47 ಶಾಶ್ವತ ನ್ಯಾಯಾಧೀಶರು ಮತ್ತು 15 ಹಂಗಾಮಿ ನ್ಯಾಯಾಧೀಶರ ಹುದ್ದೆ ಇರುತ್ತದೆ. ಒಟ್ಟು ಮೂರು ಪೀಠಗಳಿದ್ದು, ಬೆಂಗಳೂರಿನಲ್ಲಿ ಮುಖ್ಯ ಪೀಠ ಮತ್ತು ಧಾರವಾಡ ಹಾಗೂ ಕಲಬುರ್ಗಿಯಲ್ಲಿ ಎರಡು ಪೀಠಗಳಿವೆ. ಖಾಲಿ ಇರುವ 37 ನ್ಯಾಯಾಧೀಶರ ಸ್ಥಾನವನ್ನು ಕೂಡಲೇ ತುಂಬುವಂತೆ ಕೋರಿ ಇತ್ತೀಚೆಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನೂ ಸಲ್ಲಿಸಲಾಗಿದೆ.

ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ವೇಣುಗೋಪಾಲ್ ಗೌಡ ಮತ್ತು ವಕೀಲರಾದ ಬಸವರಾಜ್ ಹಾಗೂ ಬಿ ಎಂ ಅರುಣ್ ಈ ಅರ್ಜಿಯನ್ನು ಸಲ್ಲಿಸಿದ್ದು, ಸುಪ್ರೀಂಕೋರ್ಟ್ ಆದೇಶದ ಅನ್ವಯ ನ್ಯಾಯಾಧೀಶರ ನೇಮಕ ಮಾಡುವಂತೆ ಕೋರಿದ್ದಾರೆ. ಬೆಂಗಳೂರು ಹೈಕೋರ್ಟಿನಲ್ಲಿ 42 ನ್ಯಾಯಾಧೀಶರ ಪೈಕಿ ಕೇವಲ 15 ನ್ಯಾಯಾಧೀಶರು ಕಾರ್ಯ ನಿರ್ವಹಿಸುತ್ತಿದ್ದಾರೆ. ಹೈಕೋರ್ಟಿನಲ್ಲಿ 3,11,611 ಮೊಕದ್ದಮೆಗಳು ಬಾಕಿ ಉಳಿದಿದ್ದು 2,83,230 ಸಿವಿಲ್ ದಾವೆಗಳು ಬಾಕಿ ಉಳಿದಿವೆ. 28481 ಕ್ರಿಮಿನಲ್ ದಾವೆಗಳು ಬಾಕಿ ಉಳಿದಿವೆ. ನ್ಯಾಯಾಧೀಶರನ್ನು ನೇಮಕ ಮಾಡುವಲ್ಲಿ ವಿಳಂಬವಾಗಿರುವುದಕ್ಕೆ ಸುಪ್ರೀಂಕೋರ್ಟ್, ಕೇಂದ್ರ ಸರ್ಕಾರ ಮತ್ತು ರಾಜ್ಯ ಹೈಕೋರ್ಟುಗಳ ಕೊಲೇಜಿಯಂಗಳೇ ಕಾರಣ ಎಂದು ನಿವೃತ್ತ ನ್ಯಾಯಮೂರ್ತಿ ಚಂದ್ರಶೇಖರಯ್ಯ ಆರೋಪಿಸಿದ್ದಾರೆ.