ಪುಣೆ ಫ್ಲ್ಯಾಟಿನಲ್ಲಿ 50 ಬೆಕ್ಕುಗಳ ರಕ್ಷಣೆ

ಮಾಲಕಿಯರ ವಿರುದ್ಧ ಕೇಸ್

ಪುಣೆ : ಪುಣೆಯ ಕೊಂಢ್ವ ಪ್ರದೇಶದಲ್ಲಿರುವ ಬ್ರಹ್ಮ ಹೌಸಿಂಗ್ ಸೊಸೈಟಿಯ ಫ್ಲ್ಯಾಟ್ ಒಂದರಿಂದ ಪೊಲೀಸರು 50ಕ್ಕೂ ಹೆಚ್ಚು ಬೆಕ್ಕುಗಳನ್ನು ರಕ್ಷಿಸಿದ್ದಾರಲ್ಲದೆ  ಫ್ಲ್ಯಾಟಿನ ಮಾಲಕಿಯರ  ವಿರುದ್ಧ ಪ್ರಾಣಿ ಹಿಂಸೆ ತಡೆ ಕಾಯಿದೆಯನ್ವಯ ಪ್ರಕರಣ ದಾಖಲಿಸಿದ್ದಾರೆ. ಬೆಕ್ಕುಗಳು ಆ ಮನೆಯಲ್ಲಿ ಅತ್ಯಂತ ಹೀನಾಯ ಸ್ಥಿತಿಯಲ್ಲಿದ್ದವಲ್ಲದೆ ಮನೆಯ ತುಂಬೆಲ್ಲಾ ಅವುಗಳ ಮಲ ಹಾಗೂ ಗಲೀಜು ಹರಡಿಕೊಂಡಿತ್ತು.

ಮಾಲಕಿಯರಾದ ಸಂಗೀತಾ ಕಪೂರ್ ಮತ್ತಾಕೆಯ ಸಹೋದರಿ ದೀಪಿಕಾ ಕಪೂರ್ (30) ಹತ್ತಿರದ ಇನ್ನೊಂದು ಬಾಡಿಗೆ ಫ್ಲ್ಯಾಟಿನಲ್ಲಿ ವಾಸಿಸುತ್ತಿದ್ದರು. ತಾವು ಈ ಅನಾಥ ಬೆಕ್ಕುಗಳನ್ನು ರಕ್ಷಿಸಿ ಸಲಹುತ್ತಿರುವುದಾಗಿ ಅವರು ಹೇಳಿಕೊಂಡಿದ್ದಾರೆ.

ಆದರೆ  ನೆರೆಹೊರೆಯವರು ಸಹಿಸಲಸಾಧ್ಯವಾದ ಗಬ್ಬು ವಾಸನೆಯಿಂದಾಗಿಅನಿವಾರ್ಯವಾಗಿ ಪೊಲೀಸರಿಗೆ ದೂರು ನೀಡಿದ್ದರಲ್ಲದೆ ವಾಸನೆಯಿಂದ ತಮಗೆ ಆರೋಗ್ಯ ಸಮಸ್ಯೆಗಳೂ ಉದ್ಭವಿಸುತ್ತಿವೆ ಎಂದು ಆರೋಪಿಸಿದ್ದರು. ಮನೆಯ ಹತ್ತಿರ ಹೋದವರೆಲ್ಲಾ ವಾಂತಿ ಮಾಡುತ್ತಿದ್ದರು ಎಂದೂ ಸ್ಥಳೀಯ  ನಿವಾಸಿಗಳು ದೂರಿಕೊಂಡಿದ್ದರು.

ಬಿಲ್ಡಿಂಗ್ ಸೊಸೈಟಿ ಸದಸ್ಯರು ಫ್ಲ್ಯಾಟ್ ಮಾಲಕಿಯರಿಗೆ  ಅಲ್ಲಿ ಸ್ವಚ್ಛತೆ ಕಾಪಾಡಲು ತಿಳಿಸಿದ್ದರೂ ಯಾವುದೇ ಪ್ರಯೋಜನವಾಗದೇ ಇದ್ದಾಗ ಅವರು ಪ್ರಾಣಿ ಕಲ್ಯಾಣ ಕಾರ್ಯಕರ್ತರೊಬ್ಬರನ್ನು ಸಂಪರ್ಕಿಸಿದ್ದರು. ಮೆಹರ್ ಮಾತ್ರಾಣಿ ಎಂಬ ಪ್ರಾಣಿ ದಯಾ ಕಾರ್ಯಕರ್ತೆ ಹಾಗೂ ಅನಿಮಲ್ ಬೋರ್ಡ್ ಆಫ್ ಇಂಡಿಯಾ ಇದರ ಕಲ್ಯಾಣ ಅಧಿಕಾರಿ ಪೊಲೀಸ್ ದೂರು ದಾಖಲಿಸಿದ ನಂತರ ಪೊಲೀಸ್ ತಂಡವೊಂದು ಫ್ಲ್ಯಾಟಿಗೆ ಆಗಮಿಸಿ ಪರಿಶೀಲಿಸಿದಾಗ ಅವರಿಗೆ ಆಘಾತ ಕಾದಿತ್ತು.

ಮನೆಯಲ್ಲಿ ಕನಿಷ್ಠ 29 ಬೆಕ್ಕುಗಳು ಹಾಗೂ ಎರಡು ಮರಿಗಳಿದವು. ಹಲವು ಬೆಕ್ಕುಗಳು ಅಸೌಖ್ಯದಿಂದ ಬಳಲುತ್ತಿದ್ದವಲ್ಲದೆ ಇನ್ನು ಹಲವು ಗರ್ಭ ಧರಿಸಿದ್ದವು. ಮನೆಯಿಡೀ ಕಸದ ಕೊಂಪೆಯಂತಾಗಿತ್ತು.  ತೊಳೆಯದೇ ಬಿದ್ದಿರುವ ಹಲವಾರು ಪಾತ್ರೆಗಳು, ಅವಧಿ ಮೀರಿದ ಔಷಧಿಗಳು ಹಾಗೂ ಆಹಾರ ವಸ್ತುಗಳು ಎಲ್ಲೆಡೆ ಹರಡಿಕೊಂಡಿದ್ದವು. ಮನೆಯಲ್ಲಿ ಕಪೂರ್ ಸಹೋದರಿಯರ ಅನಾರೋಗ್ಯಪೀಡಿತ ತಾಯಿ ಕನಿಷ್ಠ 25 ಬೆಕ್ಕುಗಳು ಸುತ್ತುವರಿದಿರುವ ಮಂಚದಲ್ಲಿ ಮಲಗಿದ್ದು ಕಂಡು ಬಂದಿತ್ತು.