ಜಯಲಲಿತಾ ತ ನಾ ಅಧಿನಾಯಕಿ ಎಂದು ಸಾಬೀತುಪಡಿಸಿದ 5 ಮಹತ್ವದ ವಿಜಯಗಳು

ಆಕೆಯನ್ನು ಬೆಂಬಲಿಸಿದವರು ಅವರ ಗಾಯಗಳಿಗೆ ಮುಲಾಮು ಹಚ್ಚುವುದರಲ್ಲೇ ನಿರತರಾಗಿದ್ದರೆ, ಜಯಲಲಿತಾ ರಾಜಕೀಯ ಕ್ಷೇತ್ರದಲ್ಲಿ ದಾಪುಗಾಲಿಡಲಾರಂಭಿಸಿದ್ದರು.

 ಚೆನ್ನೈ : ದೇಶದ ರಾಜಕೀಯ ರಂಗದಲ್ಲಿ ವಿಶ್ವದ ಇತರ ದೇಶಗಳಂತೆಯೇ ಪುರುಷರೇ ಪ್ರಾಬಲ್ಯ ಮರೆಯುತ್ತಿದ್ದಾರೆ. ಇವರ ನಡುವೆ ರಾಜಕೀಯ ಕ್ಷೇತ್ರದಲ್ಲಿ ಎಲ್ಲಾ ಸವಾಲುಗಳನ್ನು ಮೆಟ್ಟಿ ನಿಂತು ತಮ್ಮ ಛಾಪನ್ನೊತ್ತಿ ಜನನಾಯಕರಾಗಿ ಕೆಲವೇ ಕೆಲವು ಮಹಿಳೆಯರು ಹೊರಹೊಮ್ಮಿದ್ದಾರೆ. ಇಂತಹ ಮಹಿಳಾ ರಾಜಕಾರಣಿಗಳ ಪಟ್ಟಿಯಲ್ಲಿ ನಿಸ್ಸಂಶಯವಾಗಿ ಪ್ರಥಮ ಸ್ಥಾನ ಗಿಟ್ಟಿಸಿದವರು ತಮಿಳುನಾಡಿನ ದಿವಂಗತ ಮುಖ್ಯಮಂತ್ರಿ ಜೆ ಜಯಲಲಿತಾ ಎಂದರೆ ತಪ್ಪಾಗಲಾರದು.

ತಮ್ಮ ಜೀವನದಲ್ಲಿ ಮೊದಲಾಗಿ ಮೇರು ನಟಿಯಾಗಿ ಖ್ಯಾತಿಯ ಶಿಖರವೇರಿದ್ದ ಆಕೆ ನಂತರ ತಮಿಳುನಾಡಿನ ರಾಜಕೀಯ ಅಧಿನಾಯಕಿಯಾಗಿ ಮೆರೆದಿದ್ದವರು.

ಆಕೆ ಅಧಿಕಾರ ಕಳೆದುಕೊಳ್ಳುತ್ತಾರೆಂದು ರಾಜಕೀಯ ಪಂಡಿತರು ಹಲವು ಬಾರಿ ಭವಿಷ್ಯ ನುಡಿದಿದ್ದರೂ ಅವರ ಭವಿಷ್ಯವನ್ನು ಸುಳ್ಳಾಗಿಸಿ ಆಕೆ ಮತ್ತೆ ಅಧಿಕಾರಕ್ಕೇರಿದ್ದರು. ಜನರ ನೆಚ್ಚಿನ `ಅಮ್ಮ’ ಆಗಿದ್ದರು. ಜಯಲಲಿತಾ ಅವರ ರಾಜಕೀಯ ಭವಿಷ್ಯವನ್ನು ಸುದೃಢಗೊಳಿಸಿದ್ದ ಅವರ ಐದು ವಿಜಯಗಳ ವಿಚಾರ ಇಲ್ಲಿವೆ ಓದಿ.

  1. ಜಯಲಲಿತಾರ ಪ್ರಪ್ರಥಮ ಪ್ರಮುಖ ರಾಜಕೀಯ ಜಯ ಅವರಿಗೆ ದೊರಕಿದ್ದು 1989ರಲ್ಲಿ. ಇದು ಅವರ ರಾಜಕೀಯ ಗುರು ಎಂಜಿಆರ್ ನಿಧನರಾಗಿ ಎರಡು ವರ್ಷಗಳ ನಂತರದ ಬೆಳವಣಿಗೆಯಾಗಿದೆ. ಆಗ ಎಐಎಡಿಎಂಕೆ ಇಬ್ಭಾಗವಾಗಿತ್ತು ಹಾಗೂ ಜಯಲಲಿತಾ ನೇತೃತ್ವದ ಬಣ 27 ಸೀಟುಗಳನ್ನು ಗಳಿಸಿತ್ತು. ತಮಿಳುನಾಡಿನ ಮಹಿಳೆಯೊಬ್ಬಳು ವಿಪಕ್ಷ ನಾಯಕಿಯ ಸ್ಥಾನ ಅಲಂಕರಿಸಿದ್ದು ಇದೇ ಪ್ರಥಮ. ಆಕೆಯನ್ನು ಬೆಂಬಲಿಸಿದವರು ಅವರ ಗಾಯಗಳಿಗೆ ಮುಲಾಮು ಹಚ್ಚುವುದರಲ್ಲೇ ನಿರತರಾಗಿದ್ದರೆ, ಜಯಲಲಿತಾ ರಾಜಕೀಯ ಕ್ಷೇತ್ರದಲ್ಲಿ ದಾಪುಗಾಲಿಡಲಾರಂಭಿಸಿದ್ದರು.
  2. ಜಯಲಲಿತಾ ಅವರ ದ್ವಿತೀಯ ಹಾಗೂ ಅತ್ಯಂತ ಮಹತ್ವದ ವಿಜಯ ಅವರ ಪಾಲಿಗೆ 1991ರಲ್ಲಿ, ರಾಜೀವ್ ಗಾಂಧಿ ಹತ್ಯೆಯ ನಂತರ ಒಲಿದು ಬಂದಿತ್ತು. ಕಾಂಗ್ರೆಸ್-ಎಐಎಡಿಎಂಕೆ ಮೈತ್ರಿ ಕೂಟ ಸಹಾನುಭೂತಿಯ ಅಲೆಯಲ್ಲಿ ತೇಲಿ ಜಯಾ ವಿಜಯ ಪತಾಕೆ ಹಾರಿಸಿ ತಮಿಳುನಾಡಿನ ಎರಡನೇ ಮಹಿಳಾ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಆಕೆ ಮುಖ್ಯಮಂತ್ರಿ ಹುದ್ದೆಗೇರಿದ ಅತ್ಯಂತ ಕಿರಿಯ ವ್ಯಕ್ತಿ ಎಂಬ ಹೆಗ್ಗಳಿಕೆಗೂ ಪಾತ್ರರಾದರು.
  3. ಜಯಲಲಿತಾ ಹಲವು ವಿವಾದಗಳಲ್ಲಿ ಸಿಲುಕಿದ್ದರು. 2001ರ ಚುನಾವಣೆಯ ಸಮಯದಲ್ಲಿ ಅವರು ಎರಡು ಪ್ರಮುಖ ಪ್ರಕರಣಗಳಲ್ಲಿ ಆರೋಪಗಳನ್ನು ಎದುರಿಸುತ್ತಿದ್ದರು. ಆದರೆ ಮತದಾರರು ಇದರ ಬಗ್ಗೆ ತಲೆಕೆಡಿಸಿಕೊಳ್ಳದ ಪರಿಣಾಮ ಎಐಎಡಿಎಂಕೆ ಮೈತ್ರಿ ಕೂಟ ಮತ್ತೆ ಚುನಾವಣೆಯಲ್ಲಿ ಗೆದ್ದು 234 ಕ್ಷೇತ್ರಗಳ ಪೈಕಿ 196 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿತ್ತು.
  4. ಜಯಲಲಿತಾ ವಿರುದ್ಧ ಹಲವಾರು ಪ್ರಕರಣಗಳಿದ್ದುದರಿಂದ 2011ರಲ್ಲಿ ಡಿಎಂಕೆ ತನಗೆ ವಿಜಯ ನಿಶ್ಚಿತವೆಂಬ ಆತ್ಮವಿಶ್ವಾಸದಲ್ಲಿತ್ತು. ಆದರೆ ಡಿಎಂಕೆ ಆಸೆಯನ್ನು ನುಚ್ಚುನೂರು ಮಾಡಿ ಜಯಾ ಮತ್ತೆ ಅಧಿಕಾರಕ್ಕೆ ಮರಳಿದ್ದರು. ಈ ಬಾರಿ ಎಐಎಡಿಎಂಕೆ ಜತೆ ಡಿಎಂಡಿಕೆ ಮತ್ತು ಎಡ ಪಕ್ಷಗಳೂ ಸೇರಿಕೊಂಡಿದ್ದವು.
  5. ಮೂರು ಅವಧಿಗಳ ಕಾಲ ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ಅವರಿಗೆ ಮತದಾರರ ಮನಸ್ಸನ್ನು ಹೇಗೆ ಗೆಲ್ಲುವುದೆಂಬ ಕಲೆ ಕರಗತವಾಗಿ ಹೋಗಿತ್ತು. 2016 ಚುನಾವಣೆಯಲ್ಲಿ ಯಾವುದೇ ಪಕ್ಷದ ಜತೆ ಮೈತ್ರಿ ಸಾಧಿಸದೆ ಎಐಎಡಿಎಂಕೆ ಒಬ್ಬಂಟಿಯಾಗಿ ಚುನಾವಣೆ ಎದುರಿಸಿತ್ತು. ಚುನಾವಣಾ ಫಲಿತಾಂಶಗಳು ಬರಲಾರಂಭಿಸುತ್ತಿದ್ದಂತೆ ಡಿಎಂಕೆ ಗೆಲುವು ಸಾಧಿಸಬಹುದೆಂಬ ಆಶಾವಾದ ಮೂಡಿದ್ದರೂ ನಂತರ ಅದು ಹಿಂದೆ ಬಿದ್ದು ಜಯಲಲಿತಾರ ಪಕ್ಷ ಮೇಲುಗೈ ಸಾಧಿಸಿತ್ತು. ಪುರಚ್ಚಿ ತಳೈವಿ ಮತ್ತೆ ಮುಖ್ಯಮಂತ್ರಿಯಾಗಿ ತಾನು ತಮಿಳುನಾಡಿನ  ಪ್ರಶ್ನಾತೀತ ನಾಯಕಿ ಎಂದು ಸಾಬೀತುಪಡಿಸಿದ್ದರು.