ಐವರು ವಕೀಲರು ಹೈ ಜಡ್ಜ್ ಹುದ್ದೆಗೆ ನೇಮಕ

ಸಾಂದರ್ಭಿಕ ಚಿತ್ರ

ಬೆಂಗಳೂರು : ಬರೋಬ್ಬರಿ ಮೂರು ವರ್ಷಗಳ ನಂತರ ಸುಪ್ರೀಂ ಕೋರ್ಟಿನ ಕೊಲೀಜಿಯಂ ಕರ್ನಾಟಕ ಹೈಕೋರ್ಟಿಗೆ ನ್ಯಾಯಾಧೀಶರುಗಳನ್ನಾಗಿ ನೇಮಿಸಲು ಐದು ಮಂದಿ ವಕೀಲರುಗಳ  ಹೆಸರುಗಳನ್ನು ಶಿಫಾರಸು ಮಾಡಿದೆ.

ಪ್ರಸಕ್ತ ಸಹಾಯಕ ಸಾಲಿಸಿಟರ್ ಜನರಲ್ ಆಗಿ ಸೇವೆ ಸಲ್ಲಿಸುತ್ತಿರುವ ಹಾಗೂ ಹೈಕೋರ್ಟಿನಲ್ಲಿ ಕೇಂದ್ರ ಸರಕಾರವನ್ನು ಪ್ರತಿನಿಧಿಸುತ್ತಿರುವ ಕೃಷ್ಣ ಎಸ್ ದೀಕ್ಷಿತ್, ರಾಜ್ಯ ಸರಕಾರದ ಮುಖ್ಯ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಆರ್ ದೇವದಾಸ್, ಹಿರಿಯ ವಕೀಲ ಬಿ ಎಂ ಶ್ಯಾಮ್ ಪ್ರಸಾದ್, ನೈಸ್ ಯೋಜನೆ ಸಂಬಂಧಿತ ವಿಚಾರಗಳಲ್ಲಿ ಸರಕಾರದ ವಿಶೇಷ ಪ್ರತಿನಿಧಿ ಸುನಿಲ್ ದತ್ ಯಾದವ್ ಹಾಗೂ ಎಸ್ ಜಿ ಪಂಡಿತ್ ಇವರ ಹೆಸರುಗಳನ್ನು ಹೈಕೋರ್ಟ್ ನ್ಯಾಯಾಧೀಶರ ಹುದ್ದೆಗೆ ಶಿಫಾರಸು ಮಾಡಲಾಗಿದೆ.

ಈ ಹಿಂದೆ ಹೈಕೋರ್ಟಿನಿಂದ ನ್ಯಾಯಾಧೀಶ ಹುದ್ದೆಗೆ ಶಿಫಾರಸು ಮಾಡಲ್ಪಟ್ಟ ಕೆಲವೊಂದು ವಕೀಲರ ಬಗ್ಗೆ ತಮ್ಮ ಅಸಮ್ಮತಿಯನ್ನು ಮುಖ್ಯಮಂತ್ರಿ ತೋಡಿಕೊಂಡಿದ್ದರೂ ಅದನ್ನು ಸುಪ್ರೀಂ ಕೋಟ್ ಪರಿಗಣಿಸಿಲ್ಲ.

ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಕೊಲೀಜಿಯಂ ಒಟ್ಟು 25 ಹೆಸರುಗನ್ನು ಪರಿಗಣಿಸಿ ಕರ್ನಾಟಕ ಹಾಗೂ ಕೊಲ್ಕತ್ತಾ ಹೈಕೋರ್ಟುಗಳಿಗೆ   ತಲಾ ಐದು ಮಂದಿ ಹಾಗೂ ಮದ್ರಾಸ್ ಹೈಕೋರ್ಟಿಗೆ ಒಂಬತ್ತು ಮಂದಿ ನ್ಯಾಯಾಧೀಶರುಗಳ ಹೆಸರುಗಳನ್ನು ಸೂಚಿಸಿದೆ.