ನಿಂತ ಲಾರಿಗೆ ಕಾರು ಗುದ್ದಿ 5 ಪ್ರಯಾಣಿಕರು ಸಾವು

ನಮ್ಮ ಪ್ರತಿನಿಧಿ ವರದಿ

ಅಂಕೋಲಾ : ತಾಕಿನ ಹೊನ್ನಳ್ಳಿ ಸಮೀಪ ಬುಧವಾರ ರಾತ್ರಿ ರಾಷ್ಟ್ರೀಯ ಹೆದ್ದಾರಿ 63ರಲ್ಲಿ ನಿಂತ ಲಾರಿಗೆ ವಿಜಯಪುರದಿಂದ ಸುಬ್ರಹ್ಮಣ್ಯಕ್ಕೆ ಹೊರಟಿದ್ದ ಒಟ್ಟೂ 9 ಜನರಿದ್ದ ಇನೋವಾ ಕಾರು ಡಿಕ್ಕಿ ಹೊಡೆದು ಐವರು ಮೃತಪಟ್ಟಿದ್ದಾರೆ.

ಇವರೆಲ್ಲರೂ ಒಂದೇ ಕುಟುಂಬಕ್ಕೆ ಸೇರಿದವರು ಎಂದು ತಿಳಿದುಬಂದಿದೆ. ಅಪಘಾತದ ತೀವ್ರತೆಗೆ 4 ಜನರು ಸ್ಥಳದಲ್ಲಿಯೇ ಮೃತಪಟ್ಟರೆ, ಒಬ್ಬ ಬಾಲಕಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ. ಗಾಯಗೊಂಡ ಇನ್ನೂ 4 ಜನರ ಸ್ಥಿತಿ ಗಂಭೀರವಾಗಿದೆ. ವಿಜಯಪುರದ ಹಿತ್ನಾಳದ ಪ್ರಭು ಷಣ್ಮುಖಪ್ಪ ಶಿರಾಳಶೆಟ್ಟಿ, ಸುವರ್ಣದ ರುದ್ರಪ್ಪ ಕೋರಿ, ರುದ್ರಪ್ಪ ಗುರುಪಾದಪ್ಪ ಕೋರಿ, ಆಕಾಶ ಉತ್ತಪ್ಪ ಶಿರಾಳಶೆಟ್ಟಿ, ಬಬ್ಲೇಶ್ವರದ ಸೌಮ್ಯ ಮುದುಕಪ್ಪ ಸಂಗೊಳ್ಳಿ ಮೃತಪಟ್ಟವರು. ಜುಮನಾಳದ ದಾನಪ್ಪ ರುದ್ರಪ್ಪ ಕೋರಿ, ಆದಿತ್ಯ ದಾನಪ್ಪ ಕೋರಿ, ಗಾಜಿನಕಟ್ಟೆಯ ರಾಜು ಪಾಟೀಲ ಗೊಳ್ಳಲ್ಪ, ಹಿತ್ನಾಳದ ಸಂತೋಷ ಮುತ್ತಪ್ಪ ಶಿರಾಳಶೆಟ್ಟಿ ಗಂಭೀರ ಗಾಯಗೊಂಡವರು. ಆರೋಪಿ ಚಾಲಕ ಪ್ರಭು ಶಿರಾಳಶೆಟ್ಟಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಅಂಕೋಲಾ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಮತ್ತೊಂದು ಅಪಘಾತ

ತಾಲೂಕಿನ ರಾಷ್ಟ್ರೀಯ ಹೆದ್ದಾರಿ 63ರ ಸರಳೆಬೈಲ್ ಸಮೀಪ ಬುಧವಾರ ಕೆಟ್ಟು ನಿಂತ ಲಾರಿಯೊಂದಕ್ಕೆ ಇನ್ನೊಂದು ಲಾರಿ ಡಿಕ್ಕಿ ಹೊಡೆದ ಪರಿಣಾಮ ಡಿಕ್ಕಿ ಹೊಡೆದ ಲಾರಿಯ ಚಾಲಕ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.

ಕೊಪ್ಪಳ ಜಿಲ್ಲೆಯ ಕುಷ್ಠಗಿ ತಾಲೂಕಿನ ಬಸವರಾಜ ಮಹಾಂತೇಶ ಕರಂಡಿ ಮೃತಪಟ್ಟ ಚಾಲಕನಾಗಿದ್ದಾನೆ. ಅಂಕೋಲಾದಿಂದ ಯಲ್ಲಾಪುರ ಕಡೆಗೆ ತೆರಳಿದ್ದ ಒಂದು ಲಾರಿಯು ಕೆಟ್ಟು ರಸ್ತೆಯ ಪಕ್ಕ ನಿಂತಿತ್ತು. ಇನ್ನೊಂದು ಲಾರಿಯು ಕೂಡ ಯಲ್ಲಾಪುರ ಕಡೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಮಳೆಯು ಕೂಡ ಜೋರಾಗಿ ಸುರಿಯುತ್ತಿತ್ತು. ವೇಗವಾಗಿ ಚಲಾಯಿಸಿದ ಲಾರಿ ಚಾಲಕ ಬಸವರಾಜ ಕರಂಡಿ ಅವರ ನಿರ್ಲಕ್ಷ್ಯದಿಂದಾಗಿ ರಸ್ತೆ ಪಕ್ಕ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದಿದ್ದಾನೆ. ಅಪಘಾತದ ತೀವ್ರತೆಗೆ ಚಾಲಕ ಬಸವರಾಜ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಅಪಘಾತದಿಂದಾಗಿ ಒಂದು ತಾಸು ಸುಮಾರು ಯಲ್ಲಾಪುರ-ಅಂಕೋಲಾ ನಡುವಿನ ವಾಹನ ಸಂಚಾರ ಸ್ಥಗಿತಗೊಂಡಿತ್ತು.