ಮನೆಮಂದಿಗೆ ಮಾರಕಾಸ್ತ್ರ ತೋರಿಸಿ 5 ದನ ಕಳವು

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಮಾರಕಾಸ್ತ್ರಗಳನ್ನು ತೋರಿಸಿ, ಬೆದರಿಸಿ ಐದು ಜಾನುವಾರುಗಳನ್ನು ಬಲವಂತವಾಗಿ ದರೋಡೆ ಮಾಡಿದ ಘಟನೆ ಮಂಗಳವಾರ ಮುಂಜಾನೆ ಬಜ್ಪೆ ಠಾಣಾ ವ್ಯಾಪ್ತಿಯ ತೆಂಕಎಡಪದವು ಗ್ರಾಮದ ಪಡ್ಯಾರು ಮನೆಯಲ್ಲಿ ನಡೆದಿದೆ.

ಇಲ್ಲಿನ ನಿವಾಸಿ ಗೋವಿಂದ ಎನ್ನುವವರು ಹೈನುಗಾರರಾಗಿದ್ದು, ಇವರ ಹಟ್ಟಿಯಲ್ಲಿ 11 ಜಾನುವಾರುಗಳನ್ನು ರಾತ್ರಿ ವೇಳೆ ಕಟ್ಟಿ ಹಾಕಿದ್ದರು. ನಸುಕಿನ ಜಾವ ಹಟ್ಟಿಗೆ ಬಂದ ಅಪರಿಚಿತರು 5 ಹಸುಗಳ ಹಗ್ಗವನ್ನು ಬಿಚ್ಚಿ ಕಳವು ಮಾಡಲು ಮುಂದಾಗಿದ್ದರು. ಇದೇ ವೇಳೆ ಜಾನುವಾರುಗಳು ಅಪರಿಚಿತರನ್ನು ಕಂಡು ಬೊಬ್ಬೆ ಇಟ್ಟಿವೆ. ಕೊಟ್ಟಿಗೆಯಲ್ಲಿ ಕರು ಕೂಗುವುದನ್ನು ಕೇಳಿ ಗೋವಿಂದ ಹಾಗೂ ಅವರ ಅಣ್ಣ ಗಿರಿಯ ಗೌಡರು ಹೊರಗೆ ಬಂದು ಆರೋಪಿಗಳನ್ನು ತಡೆಯಲು ಹೋದಾಗ ಆರೋಪಿಗಳು ತಮ್ಮ ಕೈಯಲ್ಲಿದ್ದ ತಲವಾರು ಹಾಗೂ ಇತರ ಮಾರಕ ಆಯುಧಗಳನ್ನು ತೋರಿಸಿ, ಬೆದರಿಸಿ ಮನೆಯ ಹೊರಗಡೆ ನಿಲ್ಲಿಸಿದ್ದ ಯಾವುದೋ ವಾಹನದಲ್ಲಿ ಐದು ಹಸುಗಳನ್ನು ತುಂಬಿಸಿಕೊಂಡು ಪರಾರಿಯಾಗಿದ್ದಾರೆ.

ಕಳವು ಮಾಡಿರುವ ಜಾನುವಾರುಗಳ ಒಟ್ಟು ಅಂದಾಜು ಮೌಲ್ಯ ರೂ.1,00,000 ಎಂದು ಹೇಳಲಾಗಿದೆ.