ಕಂಟ್ರೋಲ್ ರೂಂನಲ್ಲಿ ಪೊಲೀಸರಿಂದ ಥಳಿತ

ಪೊಲೀಸರು ಬೆನ್ನಿಗೆ ಹೊಡೆದಿರುವುದು

5 ಪೇದೆ ವಿರುದ್ಧ ಕೇಸು

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಬೆಂಡಿಚಾಲ್ ನಿವಾಸಿಗಳನ್ನು ಕಾಸರಗೋಡು ಪೊಲೀಸರು ಕಂಟ್ರೋಲ್ ರೂಂನಲ್ಲಿ ಕೂಡಿ ಹಾಕಿ ಥಳಿಸಿರುವ ಘಟನೆಗೆ ಸಂಬಂಧಿಸಿ ಐದು ಪೊಲೀಸರ ವಿರುದ್ಧ ಕೇಸು ದಾಖಲಿಸಲಾಗಿದೆ.

ಬೆಂಡಿಚ್ಚಾಲ್ ನಿವಾಸಿಗಳಾದ ಮೊಹಮ್ಮದ್ ಶಂಸೀರ್ (26), ಸಹೋದರ ಸಾಕಿರ್ (24), ಹಂಝ ಮೊಹಮ್ಮದ್ (28) ಎಂಬವರು ಹಲ್ಲೆಗೊಳಗಾದವರಾಗಿದ್ದಾರೆ.

ಹಂಝ ಮೊಹಮ್ಮದ್ ನೀಡಿದ ದೂರಿನಂತೆ ಬೈಕಿನಲ್ಲಿ ಆಗಮಿಸಿದ ಇಬ್ಬರು ಪೊಲೀಸರ ವಿರುದ್ಧ ಹಾಗೂ ಇತರ ಮೂವರು ಪೊಲೀಸರ ವಿರುದ್ಧ ಕೇಸು ದಾಖಲಾಗಿದೆ. ಕಳಿಯಡ್ಕದಲ್ಲಿ ಬೈಕಿನಲ್ಲಿ ಸಂಚರಿಸುತ್ತಿದ್ದ ಮಧ್ಯೆ ಶಂಸೀರ್ ಹಾಗೂ ಹಂಝರನ್ನು ಹೆಲ್ಮೆಟ್ ಇಲ್ಲದ ಕಾರಣಕ್ಕೆ ಪೊಲೀಸರು ಸೆರೆ ಹಿಡಿದಿದ್ದರು. ವಶಕ್ಕೆ ಪಡೆದ ಬೈಕನ್ನು ಪೊಲೀಸ್ ಠಾಣೆಗೆ ಕೊಂಡೊಯ್ಯುವ ವಿಷಯದಲ್ಲಿ ಇವರ ಮಧ್ಯೆ ವಾಗ್ವಾದ ನಡೆದಿತ್ತು. ಇದರ ಮುಂದುವರಿದ ಭಾಗವಾಗಿ ಠಾಣೆಗೆ ಬಂದ ಶಂಸೀರ್ ಹಾಗೂ ಹಂಝರನ್ನು ಪೊಲೀಸರು ಕಂಟ್ರೋಲ್ ರೂಂನಲ್ಲಿ ಹಾಕಿ ಥಳಿಸಿರುವುದಾಗಿ ದೂರಲಾಗಿದೆ. ಮಾಹಿತಿ ಅರಿತು ಅಲ್ಲಿಗೆ ಬಂದ ಶಂಶೀರನ ಸಹೋದರ ಸಾಕಿರಗೂ ಕೂಡಾ ಪೊಲೀಸರು ಥಳಿಸಿ ಗಾಯಗೊಳಿಸಿದ್ದಾರೆ ಎನ್ನಲಾಗಿದೆ.

ಹಲ್ಲೆಯಿಂದ ಗಾಯಗೊಂಡ ಮೂವರು ಕಾಸರಗೋಡು ಖಾಸಗಿ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದಾರೆ. ಈ ಮಧ್ಯೆ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿರುವುದಾಗಿ ಆರೋಪಿಸಿ ಎ ಆರ್ ಕ್ಯಾಂಪ್ ಸಿವಿಲ್ ಪೊಲೀಸ್ ಅಧಿಕಾರಿ ರಾಮಚಂದ್ರನ್ ದೂರಿನಂತೆ ಮೂವರ ವಿರುದ್ಧ ಕೇಸು ದಾಖಲಾಗಿದೆ.