ಐವರು ದರೋಡೆಕೋರ ಪೊಲೀಸರ ಬಂಧನ

ಬೆಂಗಳೂರು : ಒಬ್ಬ ಸಬ್-ಇನ್ಸ್‍ಪೆಕ್ಟರ್, ನಾಲ್ವರು ಪೊಲೀಸ್ ಪೇದೆಗಳನ್ನು ಪೀಣ್ಯದ ಉದ್ಯಮಿಯಿಂದ ಹಣ ದರೋಡೆ ಮಾಡಿದ ಆರೋಪದಲ್ಲಿ ಸೋಮವಾರ ಬಂಧಿಸಲಾಗಿದೆ.
ಆರೋಪಿ ಪೊಲೀಸರು ಇಬ್ಬರು ವೆಲ್ಡರುಗಳ ಸಹಾಯ ಪಡೆದು ತುಮಕೂರು ಜಿಲ್ಲೆಯ ಮೊಬೈಲ್ ಶಾಪ್ ಮಾಲಕ ಗಂಗಾಧರ್ ಎಂಬವರಿಂದ ಸುಮಾರು ರೂ 35.5 ಲಕ್ಷ ಹಣ ರೂ ದರೋಡೆ ಮಾಡಿದ್ದಾರೆ. ಆರೋಪಿಗಳಾದ ಸಬ್-ಇನ್ಸ್‍ಪೆಕ್ಟರ್ ಮಲ್ಲಿಕಾರ್ಜುನ, ಪೇದೆಗಳಾದ ಮಂಜುನಾಥ, ಗಿರೀಶ್, ಚಂದ್ರಶೇಖರ್ ಮತ್ತು ಅನಂತರಾಜು ಮತ್ತು ಪೊಲೀಸರಿಗೆ ಸಹಾಯ ಮಾಡಿದ ಭಾಸ್ಕರ್ ಪೊಲೀಸ್ ವಶದಲ್ಲಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ಪೀಣ್ಯ ಪೊಲೀಸರು 16 ಲಕ್ಷವನ್ನು ವಶಪಡಿಸಿಕೊಂಡಿದ್ದಾರೆ, ಉಳಿದ ಹಣ ವಶಪಡಿಸಿಕೊಳ್ಳಲು ತನಿಖೆ ಮುಂದುವರಿಸಿದ್ದಾರೆ.
ದೊಡ್ಡ ನೋಟು ಅಮಾನ್ಯದ ಬಳಿಕ ಈ ವೆಲ್ಡರ್‍ಗಳು ಜನರಿಗೆ ಅವ್ಯಾಹತವಾಗಿ ಕರೆ ಮಾಡಿ ನೋಟು ಬದಲಾಯಿಸಿ ಕೊಡುವ ಆಮಿಷ ಒಡ್ಡುತ್ತಿದ್ದರು. ಹಾಗೆಯೇ ಗಂಗಾಧರಗೆ ಕರೆ ಮಾಡಿ ಹಳೆ ನೋಟಿಗೆ ಬದಲಾಗಿ ಹೊಸ ನೋಟುಗಳನ್ನು ಕೊಡುವುದಾಗಿ ತಿಳಿಸಿದ್ದರು. ರೂ 35.5 ಲಕ್ಷ ಬದಲಾವಣೆಗೆ 30 ಪರ್ಸೆಂಟ್ ಕಮಿಷನ್ ಕೇಳಿದ್ದರು. ಅದರಂತೆ ಗಂಗಾಧರ್ ಹಣ ತಂದಿದ್ದರು. ಆದರೆ ಈ ಇಬ್ಬರೂ ಹಣ ಬದಲಾಯಿಸುವ ಬದಲು ಗಂಗಾಧರರಲ್ಲಿದ್ದ ಹಣವನ್ನು ದೋಚಿದ್ದಾರೆ. ಬಳಿಕ ಸಬ್-ಇನ್ಸ್‍ಪೆಕ್ಟರ್ ಮಲ್ಲಿಕಾರ್ಜುನಗೆ ಕರೆ ಮಾಡಿ ಮೊತ್ತದಲ್ಲಿ ಪಾಲು ಕೊಡುವ ಭರವಸೆ ನೀಡಿದ್ದರು.