4 ಲಾರಿ ಸಹಿತ ಐವರ ಬಂಧನ

ಪೊಲೀಸರು ವಶಪಡಿಸಿಕೊಂಡ ಪಂಚ್ ಮತ್ತಿತರ ಸೊತ್ತು

ನಕಲಿ ದಾಖಲೆ ಸೃಷ್ಟಿಸಿ ಬ್ಯಾಂಕುಗಳಿಗೆ ವಂಚನೆ,

ಉಳಿದವರಿಗೆ ಬಲೆ ಬೀಸಿದ ಪೊಲೀಸ್

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿ ವಿವಿಧ ಬ್ಯಾಂಕುಗಳಿಂದ ಸಾಲ ಪಡೆದು ವಂಚನೆ ಮಾಡುತ್ತಿದ್ದ ಐವರು ಆರೋಪಿಗಳನ್ನು ಬಂಧಿಸಿರುವ ಬರ್ಕೆ ಪೊಲೀಸರು ಆರೋಪಿಗಳಿಂದ ನಾಲ್ಕು ಲಾರಿಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಚಂದ್ರಶೇಖರ್ ಸುದ್ದಿಗಾರರಿಗೆ ತಿಳಿಸಿದರು.

ಬಂಧಿತ ಆರೋಪಿಗಳನ್ನು ಕೋಟಿಮುರದ ಅನಿಲ್ ಕಿರಣ್ ನರೊನ್ಹಾ, ಮರೋಳಿ ಅಳಪೆಯ ಸುಧೀರ್, ಉಳಾಯಿಬೆಟ್ಟು ಮಂಜಗುಡ್ಡೆಯ ನವೀನ್ ನರೊನ್ಹಾ ಯಾನೆ ಮೆಲ್ವಿನ್ ನರೊನ್ಹಾ, ಪಾವೂರು ಮಜಕಟ್ಟೆಯ ವಲ್ಲಿ ಯಾನೆ ವಲೇರಿಯನ್ ಡಿಸೋಜಾ ಮತ್ತು ಬಂಟ್ವಾಳ ವಗ್ಗದ ಜಬ್ಬಾರ್ ಎಂದು ಗುರುತಿಸಲಾಗಿದೆ.

ಮೂರು ಲಾರಿಗಳ ಚಾಸಿಸ್ ಮತ್ತು ಇಂಜಿನ್ ನಂಬ್ರಗಳನ್ನು ಪಡೆದುಕೊಂಡು ಅದರ ಚಾಸೀಸ್ ಮತ್ತು ಇಂಜಿನ್ ನಂಬರ್ ಬದಲಾಯಿಸಿ, 7 ವಿವಿಧ ಬ್ಯಾಂಕ್ ಮತ್ತು ಸಹಕಾರಿ ಸಂಸ್ಥೆಗಳಿಂದ ಸಾಲ ಪಡೆದು ಸುಮಾರು 93,94,020 ಲಕ್ಷ ರೂ ಸಾಲ ಪಡೆದು ವಂಚನೆ ನಡೆಸಿದ್ದಾರೆ. ನಾಲ್ಕು ಲಾರಿಗಳ ಮೌಲ್ಯ 80 ಲಕ್ಷ ರೂ ಎಂದು ತಿಳಿದುಬಂದಿದೆ. ಈ ಆರೋಪಿಗಳು ಇದೇ ರೀತಿಯಲ್ಲಿ ಇನ್ನಷ್ಟು ವಾಹನಗಳನ್ನು ಮಾರಾಟ ಮಾಡಿರುವ, ಸಾಲ ತೆಗೆದುಕೊಂಡಿರುವ ಸಾದ್ಯತೆ ಇದೆ ಎಂದು ಪೊಲೀಸ್ ಆಯುಕ್ತ ಹೇಳಿದರು.

ನಗರದ ವೇರ್ ಹೌಸ್ ಜಂಕ್ಷನ್ ಬಳಿ ಬರ್ಕೆ ಪೊಲೀಸರು ವಾಹನ ತಪಾಸಣೆಯಲ್ಲಿ ನಿರತರಾಗಿದ್ದ ಸಂದರ್ಭದಲ್ಲಿ ಆಗಮಿಸಿದ ಲಾರಿಯನ್ನು ತಡೆದು ನಿಲ್ಲಿಸಿ ವಿಚಾರಿಸಿದಾಗ ಅಸ್ಪಷ್ಟ ಮಾಹಿತಿ ಲಭ್ಯವಾಗಿದೆ. ಕೂಡಲೇ ದಾಖಲೆ ಪತ್ರಗಳನ್ನು ಕೇಳಿದಾಗ ಅವರಲ್ಲಿ ಇರಲಿಲ್ಲ. ಲಾರಿಯಲ್ಲಿ ಕಿರಣ್ ನೊರೊನ್ಹಾ, ಸುಧೀರ್, ಜಬ್ಬಾರ್ ಪ್ರಯಾಣಿಸುತ್ತಿದ್ದರು. ಪೊಲೀಸರು ಶಂಕೆಗೊಂಡು ಲಾರಿ ಕ್ಯಾಬಿನ್ ಶೋಧಿಸಿದಾಗ ಹಸಿರು ಬಣ್ಣದ ಸ್ಕೂಲ್ ಬ್ಯಾಗಿನೊಳಗೆ ಪ್ಲಾಸ್ಟಿಕ್ ತೊಟ್ಟೆಯಲ್ಲಿ ಲಾರಿಯ ಟ್ಯಾಪರಿಂಗ್ ಮಾಡುವ ಇಂಗ್ಲಿಷ್ ವರ್ಣಮಾಲೆಯ 0-9ರವರೆಗೆ ಸಂಖ್ಯೆಗಳಿರುವ ಪಂಚ್ ಪತ್ತೆಯಾಗಿವೆ.

ಆರೋಪಿಗಳನ್ನು ಇನ್ನಷ್ಟು ವಿಚಾರಣೆಗೆ ಒಳಪಡಿಸಿದಾಗ ಇನ್ನೂ ಹಲವು ಕಡೆಗಳಲ್ಲಿ ಬಚ್ಚಿಡಲಾಗಿದ್ದ ನಾಲ್ಕು ಲಾರಿಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಈ ಆರೊಪಿಗಳು ನೀಡಿದ ಸುಳಿವಿನಂತೆ ಕೊಣಾಜೆ ಬಳಿ ವಲೇರಿಯನನನ್ನು ಬಂಧಿಸಲಾಯಿತು. ಉಳಾಯಿಬೆಟ್ಟುವಿನ ನವೀನ್ ಯಾನೆ ಮೆಲ್ವಿನ್ ನೊರೊನ್ಹಾ ಎಂಬಾತನ ಜೊತೆಗೆ ಸೇರಿಕೊಂಡಿದ್ದ. ಅಲ್ಲದೆ ಬಂಟ್ವಾಳ ವಗ್ಗ ಸಮೀಪದ ಕಾವಳಕಟ್ಟೆಯ ನಿವಾಸಿ ಅಬ್ದುಲ್ ಜಬ್ಬಾರ್ ಎಂಬಾತನ ಮೂಲಕ ಲಾರಿಗಳ ನಕಲಿ ಇಂಜಿನ್ ಮತ್ತು ಚಾಸಿಸ್ ನಂಬ್ರಗಳನ್ನು ತಯಾರು ಮಾಡುವ ಸಾಧನಗಳನ್ನು ಬಳಸಿ ಲಾರಿಗಳ ಚಾಸಿಸ್ ಮತ್ತು ಇಂಜಿನ್ ನಂಬರುಗಳನ್ನು ಟ್ಯಾಂಪರ್ ಮಾಡಿ, ಸಾರಿಗೆ ಕಚೇರಿಯಿಂದ ನಕಲಿ ದಾಖಲೆಗಳನ್ನು ಸೃಷ್ಟಿಸುತ್ತಿದ್ದರು.

ಕೆನರಾ ಬ್ಯಾಂಕ್, ಸಿಂಡಿಕೇಟ್, ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಕೋ ಆಪರೇಟಿವ್ ಲಿ.ನಲ್ಲಿ ಸಾಲ ಪಡೆದು ವಂಚನೆ ನಡೆಸಿದ್ದಾರೆ. ಪ್ರಕರಣದಲ್ಲಿ ಇನ್ನೂ ಮೂವರು ಆರೋಪಿಗಳು ತಲೆ ಮರೆಸಿಕೊಂಡಿದ್ದು, ಅವರನ್ನು ಬಂಧಿಸಲು ಪೊಲೀಸರು ಬಲೆ ಬೀಸಿದ್ದಾರೆ. ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಚಂದ್ರಶೇಖರ್ ವಿವರಿಸಿದರು.