ಆನ್ಲೈನ್ ಸೆಕ್ಸ್ ರ್ಯಾಕೆಟ್ ಜಾಲ : ಐವರ ಬಂಧನ

ಕೊಚ್ಚಿ : ಅಂತರ್ಜಾಲ ತಾಣದ ಮೂಲಕ ವೇಶ್ಯಾವಾಟಿಕೆಯನ್ನು ನಡೆಸುತ್ತಿದ್ದ ಇಬ್ಬರು ಯುವತಿಯರ ಸಹಿತ ಐವರು ಆರೋಪಿಗಳನ್ನು ನಗರ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಎಲ್ಲೂರಿನ ಜಯೇಶ್ (37), ಚಿತ್ತೂರಿನ ಬಾಬು (35), ತೋಡಾಫುಜದ ಸುನೀರ್ (35) ಸೇರಿದಂತೆ ತ್ರಿಶೂರು ಮತ್ತು ಬೆಂಗಳೂರು ಮೂಲದ ಇಬ್ಬರು ಯುವತಿಯರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಈ ಸೆಕ್ಸ್ ಜಾಲದ ಪ್ರಮುಖರಾದ ಕೊಟ್ಟಾಯಂನ ಜಯೇಶ್ ಕುಮಾರ್ ಮತ್ತು ಸುಮಿ ದಂಪತಿ ನಾಪತ್ತೆಯಾಗಿದ್ದಾರೆ. ಇವರಿಬ್ಬರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಎರೂರು ವಾಸುದೇವ ರಸ್ತೆಯಲ್ಲಿರುವ ಬಾಡಿಗೆ ಮನೆಯೊಂದರಲ್ಲಿ ಇದ್ದ ಇವರು ಅಲ್ಲಿ ವ್ಯವಹಾರ ಕುದುರಿಸುತ್ತಿದ್ದರು. ಖಚಿತ ಮಾಹಿತಿ ಆಧಾರದಲ್ಲಿ ರಾತ್ರಿ 8 ಗಂಟೆಗೆ ದಾಳಿ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ವೆಬ್‍ಸೈಟುಗಳಲ್ಲಿ “ಹದಿಹರೆಯದ ಯುವತಿಯರು ಕೆಲಸಕ್ಕೆ ಬೇಕಾಗಿದ್ದಾರೆ” ಎನ್ನುವ ಜಾಹಿರಾತುಗಳನ್ನು ಹಾಕಿ ಅವರನ್ನು ಸೆಳೆಯುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಅಂತರ್ಜಾಲ ತಾಣದಲ್ಲಿ ಯುವತಿಯರು ಸಿಕ್ಕಿದ ಬಳಿಕ ಅವರನ್ನು ಜಯೇಶ್ ದೂರವಾಣಿ ಮೂಲಕ ಸಂಪರ್ಕಿಸಿ ವ್ಯವಹಾರ ಕುದುರಿಸುತ್ತಿದ್ದ. ವಿವಿಧ ಕಡೆಗಳಲ್ಲಿನ ಯುವತಿಯರನ್ನು ಇವರು ತಮ್ಮ ಸೆಕ್ಸ್ ಜಾಲದಲ್ಲಿ ಬಳಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.