ಮುಕ್ಕಚ್ಚೇರಿ ಜುಬೈರ್ ಹತ್ಯೆ : ಐವರ ಬಂಧನ

ಕೊಲೆಯ ಹಿಂದೆ ಪೂರ್ವದ್ವೇಷ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ನಗರ ಹೊರವಲಯದ ಉಳ್ಳಾಲದ ಮುಕ್ಕಚ್ಚೇರಿಯ ಜುಬೈರ್ ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ತಾವು ಜುಬೈರನನ್ನು ಹತ್ಯೆ ಮಾಡಿರುವುದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಸುರೇಶ್ ಹೇಳಿದ್ದಾರೆ.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, “ಮುಕ್ಕಚ್ಚೇರಿ ಜಮಾಲಿಯಾ ರಸ್ತೆಯ ಸುಹೈಲ್ ಯಾನೆ ಅಬ್ದುಲ್ ರಹಿಮಾನ್ ಸುಹೈಲ್ (23), ಮುಕ್ಕಚ್ಚೇರಿ ಹೈದರಾಲಿ ರಸ್ತೆಯ ಆಸಿಫ್ ಅಲಿಯಾಸ್ ಮಂದ ಆಸಿಫ್ (40), ಚೆನ್ನಯೆರೆಗುಡ್ಡೆ ಐಟಿಐ ರಸ್ತೆ ಅನಿಲ್ ಕೌಂಪೌಂಡ್ ನಿವಾಸಿ ನಿಝಾಮುದ್ದೀನ್ (23), ಸೋಮೇಶ್ವರ ಉಚ್ಚಿಲ ಸಂಕೊಲಿಗೆ ನಿವಾಸಿ ಮುಹಮ್ಮದ್ ಮುಸ್ತಾಫಾ (21) ಮತ್ತು ಉಳ್ಳಾಲ ಧರ್ಮನಗರ ತಾಜುದ್ದೀನ್ ಅಲಿಯಾಸ್ ಹಸನ್ ತಾಜುದ್ದೀನ್ (24) ಬಂಧಿತ ಆರೋಪಿಗಳು. ಇವರಲ್ಲಿ ಮಂದ ಆಸಿಫ್ ಕೊಲೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಬಂಧಿತನಾದರೆ, ಉಳಿದ ನಾಲ್ವರು ಕೂಡಾ ಜುಬೈರ್ ಹತ್ಯೆಯಲ್ಲಿ ನೇರ ಭಾಗಿಯಾಗಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಬಳಿಕ ಮತ್ತೆ ಪೊಲೀಸ್ ಕಸ್ಟಡಿಗೆ ಪಡೆದುಕೊಳ್ಳಲಾಗುವುದು ಎಂದು ಕಮಿಷನರ್ ವಿವರಿಸಿದರು.

ಎಲ್ಲಾ ಆರೋಪಿಗಳು ಕ್ರಿಮಿನಲ್ ಕೃತ್ಯದ ಹಿನ್ನೆಲೆ ಇರುವವರಾಗಿದ್ದಾರೆ. ಸುಹೈಲ್ ಎಂಬಾತನ ವಿರುದ್ಧ ಈ ಹಿಂದೆ ಒಟ್ಟು ನಾಲ್ಕು ಪ್ರಕರಣಗಳು ದಾಖಲಾಗಿದ್ದರೆ, ತಾಜುದ್ದೀನ್ ವಿರುದ್ಧ ಮನೆಗೆ ಕಲ್ಲು ಬಿಸಾಡಿ ಹಾನಿಗೊಳಿಸಿದ ಪ್ರಕರಣ, ಮುಹಮ್ಮದ್ ಮುಸ್ತಫಾ ವಿರುದ್ಧ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ, ನಿಝಾಮುದ್ದೀನ್ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ ಮತ್ತು ಮಂದ ಆಸಿಫ್ ವಿರುದ್ಧ ಈಗಾಗಲೇ ಒಟ್ಟು 10 ಪ್ರಕರಣಗಳು ದಾಖಲಾಗಿವೆ. ಜುಬೈರ್ ಹತ್ಯೆಗೆ ಪ್ರಚೋದನೆ ನೀಡಿದವರಲ್ಲಿ ಇನ್ನೂ ಹಲವು ಮಂದಿ ಇದ್ದು, ಅವರನ್ನೂ ಶೀಘ್ರವೇ ಬಂಧಿಸಲಾಗುವುದು ಎಂದರು.

ಆರೋಪಿ ನಿಝಾಮುದ್ದೀನ್ ಎಂಬಾತನ ಮಾರುತಿ ಸ್ವಿಫ್ಟ್ ಡಿಸೈರ್ ಕಾರು ಬೆಂಗಳೂರಿಗೆ ತೆರಳಿದ ಬಗ್ಗೆ ಪೊಲೀಸರಿಗೆ ಸಿಕ್ಕ ಸುಳಿವಿನ ಆಧಾರದಲ್ಲಿ ಮಾಹಿತಿಯನ್ನು ಕಲೆ ಹಾಕಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಕಮಿಷನರ್ ವಿವರಿಸಿದರು.

2016ರಲ್ಲಿ ಕೊಲೆಯಾದ ಜುಬೈರ್ ಮತ್ತು ಬಂಧಿತ ಆರೋಪಿಗಳ ನಡುವೆ ಗಲಾಟೆ ನಡೆದಿತ್ತು. ಇದೇ ಕಾರಣಕ್ಕೆ ಜುಬೈರ್ ಪೊಲೀಸರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಆರೋಪಿಗಳನ್ನು ಬಂಧಿಸಲಾಗಿತ್ತು. ಈ ಆಕ್ರೋಶದಿಂದ ಆರೋಪಿಗಳು ಜುಬೈರ್ ಹತ್ಯೆ ನಡೆಸುವ ಮೂಲಕ ಸೇಡು ತೀರಿಸಿಕೊಂಡಿದ್ದಾರೆ ಎಂದರು. ಅಲ್ಲದೆ ಜುಬೈರ್ ಹತ್ಯೆಗೂ ಗಾಂಜಾ ವ್ಯವಹಾರಕ್ಕೂ ಯಾವುದೇ ಸಂಬಂಧ ಇಲ್ಲ. ಇದುವರೆಗಿನ ತನಿಖೆಯಲ್ಲಿ ಈ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ. ಹತ್ಯೆಗೀಡಾದ ಜುಬೈರ್ ಮತ್ತು ಹಲ್ಲೆಗೊಳಗಾಗಿದ್ದ ಇಲ್ಯಾಸ್ ಮೇಲೆ ಯಾವುದೇ ಪ್ರಕರಣ ದಾಖಲಾಗಿಲ್ಲ. ಆರೋಪಿಗಳ ಬಂಧನಕ್ಕೆ ಪ್ರತ್ಯೇಕ ನಾಲ್ಕು ತಂಡಗಳನ್ನು ರಚಿಸಲಾಗಿತ್ತು ಎಂದರು.

 

 

1 COMMENT

Comments are closed.