ಹಣ ಪಣವಾಗಿಟ್ಟು ಲೂಡೋ ಆಡುತ್ತಿದ್ದ ಐವರ ಬಂಧನ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಹಣವನ್ನು ಪಣವಾಗಿಟ್ಟು ಲೂಡೋ ಗೇಮ್ ನಡೆಯುತ್ತಿದ್ದ ಕ್ಲಬ್ಬಿಗೆ ದಾಳಿ ನಡೆಸಿದ ಕದ್ರಿ ಪೊಲೀಸರು ಐವರು ಆರೋಪಿಗಳನ್ನು ಆಟಕ್ಕೆ ಬಳಸಿದ ಸೊತ್ತುಗಳೊಂದಿಗೆ ನಗದು ಹಣವನ್ನೂ ವಶಕ್ಕೆ ಪಡೆದುಕೊಂಡಿದ್ದಾರೆ.

ಸುಧೀರ್, ಚೇತಕ್, ಪ್ರಸಾದ್, ಅಬ್ದುಲ್ ಲತೀಫ್ ಮತ್ತು ಪ್ರಕಾಶ್ ಶೆಟ್ಟಿ ಬಂಧಿತ ಆರೋಪಿಗಳು. ಇವರೆಲ್ಲರೂ ನಗರದ ಅಂಬೇಡ್ಕರ್ ವೃತ್ತದ ಬಳಿ ಇರುವ ಸ್ಮಾರ್ಟ್ ವರ್ಸ್ ಎನ್ನುವ ಕಟ್ಟಡದ ನೆಲಮಹಡಿಯಲ್ಲಿರುವ ವರಿತೇ ರಿಕ್ರಿಯೇಶನ್ ಕ್ಲಬ್ಬಿಗೆ ನೀಡಿದ ಪರವಾನಿಗೆಯನ್ನೂ ಉಲ್ಲಂಘಿಸಿ ಹಣವನ್ನು ಪಣವಾಗಿಟ್ಟುಕೊಂಡು ಗೇಮ್ ಆಡುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ದೊರಕಿದ ಹಿನ್ನೆಲೆಯಲ್ಲಿ ಠಾಣೆಯ ಸಿಬ್ಬಂದಿ ಮತ್ತು ಪಂಚರು ದಾಳಿ ನಡೆಸಿ ಆಟದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲದೆ ಆಟಕ್ಕೆ ಬಳಸಿದ 7000 ರೂ ಹಣವನ್ನೂ ವಶಕ್ಕೆ ಪಡೆದುಕೊಂಡಿದ್ದಾರೆ. ಕದ್ರಿ ಠಾಣೆಲ್ಲಿ ಪ್ರಕರಣ ದಾಖಲಾಗಿದೆ.