ಸಯನೈಡ್ ಕಿಲ್ಲರ್ ಮೋಹನ್ ನಾಲ್ಕನೇ ಆರೋಪ ಸಾಬೀತು : ಜೀವಾವಧಿ ಶಿಕ್ಷೆ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಯುವತಿಯರನ್ನು ತನ್ನ ಮೋಹಪಾಶದಲ್ಲಿ ಸಿಲುಕಿಸಿ, ಅವರಿಗೆ ಮದುವೆಯಾಗುವ ಭರವಸೆ ನೀಡಿ, ಅವರನ್ನು ಲೈಂಗಿಕವಾಗಿ ಬಳಸಿ ಬಳಿಕ ಹತ್ಯೆಮಾಡಿ ಚಿನ್ನಾಭರಣದೊಂದಿಗೆ ಪರಾರಿಯಾಗುತ್ತಿದ್ದ ಲೇಡಿ ಕಿಲ್ಲರ್, ಸಯನೈಡ್ ಮೋಹನನ ನಾಲ್ಕನೇ ಪ್ರಕರಣದಲ್ಲೂ ಈತ ಅಪರಾಧಿ ಎಂದು ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ನಗರದ ಆರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ನೀಡಿದೆ.

ಅತ್ಯಾಚಾರ ಸಂಬಂಧಿಸಿ ಸೆಕ್ಷನ್ 376ನಲ್ಲಿ 7 ವರ್ಷ ಕಠಿಣ ಸಜೆ ಹಾಗೂ 5,000 ರೂ ದಂಡ, ಅಪಹರಣ ಸಂಬಂಧಿಸಿ ಸೆಕ್ಷನ್ 366ನಲ್ಲಿ 6 ವರ್ಷ ಕಠಿಣ ಸಜೆ, 4,000 ರೂ ದಂಡ, ವಿಷವುಣಿಸಿದ ಸೆಕ್ಷನ್ 328ನಲ್ಲಿ 7 ವರ್ಷ ಕಠಿಣ ಸಜೆ ಹಾಗೂ 5,000 ರೂ ದಂಡ, ಸಾಕ್ಷಿನಾಶ ಸಂಬಂಧಿಸಿ ಸೆಕ್ಷನ್ 201ನಲ್ಲಿ 5 ವರ್ಷ ಕಠಿಣ ಸಜೆ, 3,000 ರೂ ದಂಡ, ಆಭರಣ ದೋಚಿದಕ್ಕೆ ಸೆಕ್ಷನ್ 392ನಲ್ಲಿ 5 ವರ್ಷ ಕಠಿಣ ಸಜೆ, 4,000 ರೂ ದಂಡ ಪ್ರತೀ ಸೆಕ್ಷನ್ನಿನಲ್ಲಿ ದಂಡ ಪಾವತಿಸಲು ತಪ್ಪಿದಲ್ಲಿ 2 ತಿಂಗಳು ಜೈಲುವಾಸ ಶಿಕ್ಷೆ ಪ್ರಮಾಣ ಪ್ರಕಟವಾಗಿದ್ದು, ಎಲ್ಲಾ ಶಿಕ್ಷೆಯನ್ನು ಏಕಕಾಲಕ್ಕೆ ಸೈನೈಡ್ ಮೋಹನ್ ಅನುಭವಿಸಬೇಕಾಗಿದೆ.

ಸೆಕ್ಷನ್ 302ರ ಅಡಿಯಲ್ಲಿ ಸಯನೈಡ್ ಮೋಹನಗೆ ಜೀವಾವಧಿ ಶಿಕ್ಷೆ ಹಾಗೂ 26 ಸಾವಿರ ರೂ ದಂಡ ವಿಧಿಸಿ ನ್ಯಾಯಾಧೀಶ ಡಿ ಟಿ ಪುಟ್ಟರಂಗ ಸ್ವಾಮಿ ಅವರು ಆದೇಶ ಹೊರಡಿಸಿದರು. 2004ರಿಂದ 2009ರ ಅವಧಿಯಲ್ಲಿ ಸುಮಾರು 20 ಮಂದಿ ಯುವತಿಯರನ್ನು ಅತ್ಯಾಚಾರ ಎಸಗಿ ಕೊಲೆಗೈದ ಆರೋಪವನ್ನು ಮೋಹನ್ ಎದುರಿಸುತ್ತಿದ್ದಾನೆ.

ಪುತ್ತೂರು ತಾಲೂಕಿನ ಪಟ್ಟೆಮಜಲಿನ ಬೀಡಿ ಕಟ್ಟುವ ಯುವತಿಯನ್ನು ಮೋಹನ ತನ್ನ ಹೆಸರು ಆನಂದ್ ಎಂದು ಹೇಳಿ ಪರಿಚಯಿಸಿಕೊಂಡಿದ್ದ. ಆಕೆಯನ್ನು ಮದುವೆಯಾಗುವುದಾಗಿ ಭರವಸೆ ಕೊಟ್ಟಿದ್ದ. 2009ರ ಸೆಪ್ಟೆಂಬರ್ 17ರಂದು ಇಬ್ಬರೂ ಮಡಿಕೇರಿಗೆ ಹೋಗಿದ್ದ ವೇಳೆ ಮೋಹನ್ ಆಕೆಯೊಂದಿಗೆ ಲೈಂಗಿಕ ಸಂಪರ್ಕ ನಡೆಸಿದ್ದ. ಬಳಿಕ ಸಯನೈಡ್ ಕೊಟ್ಟು ಶೌಚಾಲಯದಲ್ಲಿ ಕೊಲೆ ಮಾಡಿ ಚಿನ್ನಾಭರಣ ಸಹಿತ ಅಲ್ಲಿಂದ ಪರಾರಿಯಾಗಿದ್ದ.

ಮಡಿಕೇರಿಯಲ್ಲಿ ಇದೊಂದು ಅಸಹಜ ಸಾವು ಎಂದು ಪ್ರಕರಣ ದಾಖಲಾಗಿತ್ತು. ಬಂಟ್ವಾಳದ ಬರಿಮಾರಿನ ಯುವತಿಯ ಕೊಲೆ ಪ್ರಕರಣದ ಪತ್ತೆಯೊಂದಿಗೆ ಸಯನೈಡ್ ಮೋಹನನ ಸರಣಿ ಹತ್ಯೆ ವಿಚಾರ ಬಯಲಾಗಿತ್ತು. ಬಳಿಕ ಇತರ ಪ್ರಕರಣಗಳೂ ಬೆಳಕಿಗೆ ಬಂದಿದ್ದವು.

ಸಿಐಡಿಗೆ ಹಸ್ತಾಂತರವಾಗಿದ್ದ ಈ ಪ್ರಕರಣ 44 ಸಾಕ್ಷಿಗಳನ್ನು ವಿಚಾರಿಸಿ 60 ದಾಖಲೆಗಳನ್ನು ಹಾಜರುಪಡಿಸಲಾಗಿತ್ತು.