2016ರಲ್ಲಿ ಕೊಂಕಣ ರೈಲ್ವೇಯಲ್ಲಿ 45 ಅನಾಥ ಮಕ್ಕಳ ಪತ್ತೆ, ಪಾಲಕರ ವಶಕ್ಕೆ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಕಳೆದ ವರ್ಷ ಕೊಂಕಣ ರೈಲ್ವೇಯಲ್ಲಿ ಆರ್ ಪಿ ಎಫ್ ಸಿಬ್ಬಂದಿ, ರೈಲು ನಿಲ್ದಾಣಗಳಲ್ಲಿ ಮನೆಯಿಂದ ತಪ್ಪಿಸಿಕೊಂಡು ಅಲೆದಾಡುತ್ತಿದ್ದ ಅಥವಾ ನಾಪತ್ತೆಯಾಗಿದ್ದ 45 ಮಕ್ಕಳನ್ನು ಪತ್ತೆ ಹಚ್ಚಿ ಚೈಲ್ಡ್ ಲೈನ್ ಮತ್ತು ಮಕ್ಕಳ ಪಾಲಕರಿಗೆ ಹಸ್ತಾಂತರಿಸಿದೆ.

ಕೊಂಕಣ ರೈಲ್ವೇ ಪ್ರಯಾಣಿಕರಿಗೆ ಉತ್ತಮ ಸೇವಾ ಭದ್ರತೆ ಮತ್ತು ಸುರಕ್ಷತೆ ಒದಗಿಸುವ ನಿಟ್ಟಿನಲ್ಲಿ ಆರ್ ಪಿ ಎಫ್ ವಿಶೇಷ ಕಾರ್ಯಾಚರಣೆ ನಡೆಸುತ್ತಿದೆ. ಮಂಗಳೂರಿನಿಂದ ರೋಹಾದವರೆಗಿನ 739 ಕಿ ಮೀ ಕೊಂಕಣ ರೈಲ್ವೇ ಅಂತರದಲ್ಲಿ ಸಂಪೂರ್ಣ ಸುರಕ್ಷತೆಗೆ ಆರ್ ಪಿ ಎಫ್ ಆದ್ಯತೆ ನೀಡುತ್ತಿದೆ ಎಂದು ಆರ್ ಪಿ ಎಫ್ ಪ್ರಧಾನ ನಿರೀಕ್ಷಕ ಹಾಗೂ ಮುಖ್ಯ ಸುರಕ್ಷತಾ ಆಯುಕ್ತ ಎ ಎನ್ ಸಿನ್ಹಾ ಹೇಳಿದರು.

2016ರಲ್ಲಿ ಗೋವಾ ರಾಜ್ಯದಲ್ಲಿ ಕೊಂಕಣ ರೈಲ್ವೇ ಪ್ರಯಾಣಿಕರಿಗೆ ಅಕ್ರಮ ಮದ್ಯ ಸಾಗಾಟದಾರರಿಂದ ಭಾರೀ ತೊಂದರೆ ಉಂಟಾಗಿದ್ದು, ಆರ್ ಪಿ ಎಫ್ ಸೂಕ್ತ ಕ್ರಮ ಅನುಸರಿಸಿದೆ. ಕಳೆದ ವರ್ಷ ಇಂತಹ 32 ಸಮಾಜಘಾತುಕ ಶಕ್ತಿಗಳನ್ನು ಬಂಧಿಸಿ 5,26382 ರೂ ಮೌಲ್ಯದ 6830 ಮದ್ಯದ ಬಾಟಲಿ ಜಪ್ತಿ ಮಾಡಲಾಗಿದೆ. ಇದನ್ನು ಅಬಕಾರಿ ಇಲಾಖೆಗೆ ಹಸ್ತಾಂತರಿಸಲಾಗಿದೆ ಎಂದು ಸಿನ್ಹಾ ತಿಳಿಸಿದರು.

ಇದೇ ವೇಳೆ ರೈಲಿನಲ್ಲಿ ಅಪರಾಧ ಕೃತ್ಯ ನಡೆಸಿದ 10 ಮಂದಿ ಕ್ರಿಮಿನಲ್ಲುಗಳನ್ನು ಬಂಧಿಸಲಾಗಿದೆ. ಪ್ರಯಾಣಿಕರಿಂದ ನಾಪತ್ತೆಯಾಗಿದ್ದ 1,47,516 ರೂ ಮೌಲ್ಯದ ಸೊತ್ತು ಪುನಃ ಜಪ್ತಿ ಮಾಡಲಾಗಿದೆ. ಅಲ್ಲದೆ ಭಟ್ಕಳದಲ್ಲಿ ಒಬ್ಬನ ಬಂಧನದೊಂದಿಗೆ 23,22,830 ರೂ ಮೌಲ್ಯದ ಹಳೆ ಕರೆನ್ಸಿ ವಶಪಡಿಸಿಕೊಳ್ಳಲಾಗಿದೆ.