ಸುಬ್ರಹ್ಮಣ್ಯದಲ್ಲಿ 439 ಭಕ್ತರಿಂದ ಎಡೆಸ್ನಾನ

ಸುಬ್ರಹ್ಮಣ್ಯ : ದಕ್ಷಿಣ ಕನ್ನಡ ಜಿಲ್ಲೆಯ ನಾಗಾರಾಧನೆಯ ತಾಣ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪಂಚಮಿ ದಿನವಾದ ಭಾನುವಾರದಂದು 439 ಭಕ್ತಾದಿಗಳು ಎಡೆಸ್ನಾನ ಸೇವೆ ನೆರವೇರಿಸಿದರು.

ದೇವರಿಗೆ ಮಹಾಪೂಜೆಯ ಬಳಿಕ ಮಧ್ಯಾಹ್ನ ದೇವಳದ ಹೊರಾಂಗಣದ ಸುತ್ತಲೂ ಬಾಳೆ ಎಲೆಗಳನ್ನು  ಹಾಕಿ ಅದರ ಮೇಲೆ ದೇವಳದ ಪುರೋಹಿತರು ನೈವೇದ್ಯವನ್ನು ಬಡಿಸಿದರು. ಬಳಿಕ ದೇವಳದ ಗೋವುಗಳನ್ನು ಅಲ್ಲಿಗೆ ಕರೆದುಕೊಂಡು ಬರಲಾಯಿತು. ಗೋವುಗಳು  ಎಲೆಯ ಮೇಲೆ ಬಡಿಸಿದ ನೈವೇದ್ಯ ಪ್ರಸಾದವನ್ನು ತಿಂದ ಬಳಿಕ ಇದೇ ಅನ್ನಪ್ರಸಾದದ ಎಲೆಯ ಮೇಲೆ ಉರುಳು ಸೇವೆ ನಡೆಯಿತು. ಇಂದು ಕೂಡಾ ಕುಕ್ಕೆಯಲ್ಲಿ ಷಷ್ಠಿ ಉತ್ಸವ ನಡೆಯಲಿದ್ದು, ಕ್ಷೇತ್ರದಲ್ಲಿ ಎಡೆಸ್ನಾನ ನಡೆಯಲಿದೆ.

ಸುಪ್ರೀಂಕೋರ್ಟ್ ತೀರ್ಪಿನ ಬಳಿಕ ಇಲ್ಲಿ ನಡೆಯುತ್ತಿದ್ದ ಮಡೆಸ್ನಾನವನ್ನು ನಿಲ್ಲಿಸಲಾಗಿದೆ. ಪ್ರಗತಿಪರರ, ಚಿಂತಕರಿಂದ ಮಡೆಸ್ನಾನಕ್ಕೆ ಭಾರೀ ವಿರೋಧ ವ್ಯಕ್ತವಾಗಿ ಪ್ರಕರಣ ಹೈಕೋರ್ಟ್, ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ಬಳಿಕ ಸುಪ್ರೀಂಕೋರ್ಟ್ ಮಡೆಸ್ನಾನಕ್ಕೆ ನಿಷೇಧ ಹೇರಿದ ಹಿನ್ನೆಲೆಯಲ್ಲಿ ಇದೀಗ ಎಡೆಸ್ನಾನ ನಡೆಸಲಾಗುತ್ತಿದೆ. ಬಿಗು ಬಂದೋಬಸ್ತ್ ಏರ್ಪಡಿಸಲಾಗಿತ್ತು.