ಮನೆಯಲ್ಲಿ 41 ಅಕ್ರಮ ಸಿಲಿಂಡರ್ ಪತ್ತೆ, ವಶ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಭಾರತ್, ಎಚ್ ಪಿ, ಇಂಡೇನ್ ಕಂಪೆನಿಗಳಿಗೆ ಸೇರಿದ ಸುಮಾರು 41 ಸಿಲಿಂಡರ್‍ಗಳನ್ನು ಕುಲಶೇಖರದಲ್ಲಿರುವ ಬಾಡಿಗೆ ಮನೆಯಲ್ಲಿ ಅಕ್ರಮವಾಗಿ ಶೇಖರಿಸಿಟ್ಟಿರುವುದನ್ನು ಕದ್ರಿ ಪೊಲೀಸರು ಹಾಗೂ ಆಹಾರ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ.

ಬಿಜೈ ನಿವಾಸಿ ಕುಲಶೇಖರದಲ್ಲಿ ಬಾಡಿಗೆ ಮನೆ ಹೊಂದಿದ್ದ ಅನಂತರಾಜು (45) ಮನೆಯಲ್ಲಿ ಇವುಗಳು ಪತ್ತೆಯಾಗಿವೆ. ಇವುಗಳಲ್ಲಿ 9 ಕಮರ್ಶಿಯಲ್ ಸಿಲಿಂಡರುಗಳಾದರೆ, ಉಳಿದವು ಡೊಮೆಸ್ಟಿಕ್. ಐದು ಸಿಲಿಂಡರುಗಳಲ್ಲಿ ಅನಿಲ ತುಂಬಿ ಭರ್ತಿಯಾಗಿದ್ದವು.

ಹಲವು ವರ್ಷಗಳಿಂದ ಆರೋಪಿ ಅನಂತರಾಜು ಅಕ್ರಮ ಸಿಲಿಂಡರ್ ಮಾರಾಟ ಮಾಡುತ್ತಿದ್ದನೆನ್ನಲಾಗಿದೆ.

ವಿಟ್ಲದ ನಿವಾಸಿಯೊಬ್ಬರು ಕುಲಶೇಖರದಲ್ಲಿನ ಈ ಮನೆಯನ್ನು ಅನಂತರಾಜುಗೆ 8 ಸಾವಿರ ರೂ  ಬಾಡಿಗೆ ನೆಲೆಯಲ್ಲಿ ಕೊಟ್ಟಿದ್ದು, ಅವರು ವಿದೇಶದಲ್ಲಿ ನೆಲೆಸಿದ್ದರು. ಆದರೆ ಕಳೆದ ಆರು ತಿಂಗಳಿನಿಂದ ಬಾಡಿಗೆ ಸಿಗದ ಹಿನ್ನೆಲೆಯಲ್ಲಿ ಮಾಲಕರು ಬಾಡಿಗೆ ಮನೆ ಬಿಡಲು ಸೂಚಿಸಿದಾಗ ಹೋಗುವುದಿಲ್ಲ ಎಂದು ಹೇಳಿ ಬೆದರಿಕೆ ಹಾಕಿದ್ದ.

ಬಳಿಕ ಅವರು ವಿಚಾರಿಸಿದಾಗ ಈತ ಅಕ್ರಮ ಸಿಲಿಂಡರ್ ಮಾರಾಟ ಮಾಡುತ್ತಿರುವ ಸಂಗತಿ ಗೊತ್ತಾಗಿದೆ. ಕೂಡಲೇ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಅವರು ಆಹಾರ ಇಲಾಖೆ ಅಧಿಕಾರಿಗಳೊಂದಿಗೆ ದಾಳಿ ನಡೆಸಿ ಸಿಲಿಂಡರ್‍ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.