ಉಂಬ್ಲೆಬೈಲು ಗ್ರಾಮಸ್ಥರಲ್ಲಿ ಭೀತಿ ಮೂಡಿಸಿದ ನಾಲ್ಕು ಹುಲಿಗಳು

Tiger.

ಶಿವಮೊಗ್ಗ : ಕಳೆದ ಒಂದು ವಾರದಿಂದ ಶಿವಮೊಗ್ಗ ತಾಲೂಕಿನ ಉಂಬ್ಲೆಬೈಲು ಗ್ರಾಮದಲ್ಲಿ ನಾಲ್ಕು ಹುಲಿಗಳು ಅಡ್ಡಾಡುತ್ತಿದ್ದು, ಗ್ರಾಮದ ಜನರಲ್ಲಿ ಭೀತಿಯನ್ನು ಸೃಷ್ಟಿಸಿದೆ. ಗ್ರಾಮಸ್ಥರು ಹೇಳುವ ಪ್ರಕಾರ ಉಂಬ್ಲೆಬೈಲಿನ ಭದ್ರಾ ಮೀಸಲು ಅರಣ್ಯದ ಹೊರಭಾಗದಲ್ಲಿ ಇವುಗಳು ಕಂಡುಬರುತ್ತಿದ್ದು, ಈಗಾಗಲೇ ಗ್ರಾಮದ ರೈತರ ಹಲವು ಜಾನುವಾರುಗಳನ್ನು ಬಲಿ ಪಡೆದುಕೊಂಡಿವೆ.

ರಕ್ಷಿತಾರಣ್ಯದ ಹೊರಭಾಗದಲ್ಲಿರುವ ರೈತರು ತಮ್ಮ ಜಾನುವಾರುಗಳನ್ನು ಮೇಯಲೆಂದು ಬಿಡುತ್ತಿದ್ದು, ಗುಡ್ಡಗಾಡು ಪ್ರದೇಶಕ್ಕೆ ತೆರಳುವ ಇವುಗಳನ್ನು ಹುಲಿಗಳು ಕೊಂದು ಹಾಕುತ್ತಿವೆ ಎನ್ನುವುದು ಗ್ರಾಮಸ್ಥರ ದೂರು.

ಇದಲ್ಲದೇ ಬೈಕ್ ಸವಾರರು ಕೂಡಾ ಹುಲಿಗಳು ರಸ್ತೆಗಳಲ್ಲಿ ಅಡ್ಡಾಡುವುದನ್ನು ಕಂಡಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಇದಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

“ಹುಲಿಗಳು ಭದ್ರಾ ಜಲಾಶಯದ ಬಳಿ ಸುತ್ತಾಡುವ ಬಗ್ಗೆ ಮಾಹಿತಿ ಇದೆ. ನಾವು ಹುಲಿಗಳು ಗ್ರಾಮ ಪ್ರವೇಶಿಸದಂತೆ ಮುನ್ನೆಚ್ಚರಿಕೆ ವಹಿಸಿದ್ದೇವೆ. ಕೂಡಲೇ ಕ್ರಮಕೈಗೊಳ್ಳಲಿದ್ದೇವೆ. ಗ್ರಾಮಸ್ಥರು ಭೀತಿಪಡುವ ಅಗತ್ಯವಿಲ್ಲ” ಎಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕೆ ಎಚ್ ನಾಗರಾಜ್ ಹೇಳಿದ್ದಾರೆ. ಕಳೆದೆರಡು ದಿನಗಳ ಹಿಂದೆ ಕೇವಲ ಗ್ರಾಮದಿಂದ 2 ಕಿ ಮೀ ದೂರದಲ್ಲಿ ನಾಲ್ಕು ಹುಲಿಗಳು ಅಡ್ಡಾಡುವುದನ್ನು ಗ್ರಾಮಸ್ಥರು ಕಣ್ಣಾರೆ ಕಂಡು ಆತಂಕಗೊಂಡಿದ್ದಾರೆ.