ಹೊಂಡಕ್ಕೆ ಬಿದ್ದ 4 ಕಾಡುಕೋಣ ರಕ್ಷಣೆ

ಶಿರಸಿ : ಇಲ್ಲಿಂದ 40 ಕಿ ಮೀ ದೂರದ ನಿಲ್ಕುಂದ ಸಮೀಪ ಹುತಗಾರದ ಬಳಿ ಮಂಗಳವಾರ ನಸುಕಿನಲ್ಲಿ ತೋಟಕ್ಕೆ ಬಂದು ಬೆಳೆಹಾನಿ ಮಾಡಿ ವಾಪಸ್ ಹೋಗುವಾಗ ಕೃಷಿಹೊಂಡಕ್ಕೆ ಬಿದ್ದ ನಾಲ್ಕು ಕಾಡುಕೋಣವನ್ನು ಊರವರ ಸಹಕಾರದಿಂದ ಅರಣ್ಯ ಇಲಾಖೆಯವರು ರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ.

ಹುತಗಾರದ ಮಹಾಬಲೇಶ್ವರ ಗೌಡರ ತೋಟಕ್ಕೆ ಬೆಳಗ್ಗಿನ ಜಾವ 4 ಕಾಡುಕೋಣ ಪ್ರವೇಶಿಸಿ ಅಡಿಕೆ, ಬಾಳೆ ಗಿಡಗಳನ್ನು ತುಳಿದು 20-30 ಸಾವಿರ ರೂ ನಷ್ಟ ಮಾಡಿ ಹೋಗುವಾಗ ಅಲ್ಲಿ ನಿರ್ಮಿಸಿದ್ದ ದೊಡ್ಡ ಕೃಷಿ ಹೊಂಡದಲ್ಲಿ ಬಿದ್ದು ಕೂಗತೊಡಗಿದೆ. ಜನರು ಇದನ್ನು ಕಂಡು ಅರಣ್ಯಾಧಿಕಾರಿಗೆ ತಿಳಿಸಿದರು.

ಬಳಿಕ ಒಂದು ಜೆಸಿಬಿ ತರಿಸಿಕೊಂಡ ಅರಣ್ಯ ಸಿಬ್ಬಂದಿ ತೋಟದ ಕೆಳಗೆ ಇರುವ ಕಾಡಿನತ್ತ ಕಾಡುಕೋಣ ಹೋಗಲು ದಾರಿ ಆಗುವಂತೆ ಜೆಸಿಬಿಯಿಂದ ಕೆಳಗೆ ದಾರಿ ಮಾಡಿದಾಗ ನಿಧಾನವಾಗಿ ಮೇಲೆ ಹತ್ತಿದ 4 ಕಾಡುಕೋಣ ಬದುಕಿದ ಸಂತಸದಲ್ಲೇ ಕಾಡಿನತ್ತ ಓಡಿಹೋದವು. ಒಂದೇ ಸಲ 4 ಕಾಡುಕೋಣ ಕಾಣಿಸಿಕೊಂಡಿರುವದು ಹಾಗೂ ಅದರ ಜೀವ ಉಳಿಸಿರುವ ಘಟನೆ ಜಿಲ್ಲೆಯಲ್ಲೇ ಪ್ರಥಮ ಎನ್ನಲಾಗಿದೆ.

 

 

 

LEAVE A REPLY