ಬಂಧಿತ 6 ಜನರಲ್ಲಿ ನಾಲ್ವರು ಮಂಗಳೂರು ಮೂಲದವರು

ಕೊಡಗಿನ ಹೊಸಪಟ್ನ ದರೋಡೆ ಪ್ರಕರಣ

ಮಡಿಕೇರಿ : ಕುಶಾಲನಗರದ ಸಮೀಪದ ಹೊಸಪಟ್ನದಲ್ಲಿ ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಶಕ್ಕೆ ಪಡೆದುಕೊಂಡಿರುವ ಆರು ಆರೋಪಿಗಳಲ್ಲಿ ನಾಲ್ಕು  ಮಂದಿ ಮಂಗಳೂರು ಮೂಲದವರು ಎಂದು ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಪ್ರಸಾದ್ ಹೇಳಿದ್ದಾರೆ.

ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ವಿವರಣೆ ನೀಡಿದ ಅವರು ಹೊಸಪಟ್ನ ಗ್ರಾಮದ ಹೆಚ್ ಡಿ ಶಿವಕುಮಾರ್ ಅವರ ಮನೆಯಲ್ಲಿ ನ 24ರಂದು ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಪ್ರಮುಖ ಮಾಹಿತಿಗಳನ್ನು ಕಲೆ ಹಾಕಲಾಗಿದೆ ಎಂದರು.

ಲಾರಿ ಚಾಲಕ ಉಪ್ಪಿನಂಗಡಿ ನಿವಾಸಿ ಅಬ್ದುಲ್ ರೆಹಮಾನ್ ಅಲಿಯಾಸ್ ಜಿಯಾ (24), ಉಳ್ಳಾಲದ ಗುಜರಿ ವ್ಯಾಪಾರಿ ಮೊಹಮ್ಮದ್ ಅಲೀಫ್ (28), ತೊಕ್ಕೊಟ್ಟಿನ ಮೀನು ವ್ಯಾಪಾರಿ ಮೊಹಮ್ಮದ್ ಫಯಾಸ್ (28) ಹಾಗೂ ಹಂಪನಕಟ್ಟೆಯ ಟೈಲರ್ ವೃತ್ತಿಯ ಜಾಫರ್ ಸಾಧಿಕ್ (25) ಬಂಧಿತ ಆರೋಪಿಗಳು.

ಈ ಎಲ್ಲಾ ಆರೋಪಿಗಳು ತಲೆಮರೆಸಿಕೊಂಡಿರುವ ನಿಜಾಮ್ (ನಿಜ್ಜು), ಮಜೀದ್, ಸಲಿಯಾತ್ (ಸಲಿತ್), ಜಲಾಲ್ ಅವರೊಂದಿಗೆ ಸೇರಿ ಇನ್ನೋವಾ ಕಾರನ್ನು ಆಲಿ ಎಂಬಾತನಿಂದ ಪಡೆದುಕೊಂಡು ಮಂಗಳೂರಿನಿಂದ ಮಡಿಕೇರಿಗೆ ಬಂದು ಆಟೋ ಚಾಲಕ ಕೃಷ್ಣನನ್ನು ಭೇಟಿ ಮಾಡಿ ದರೋಡೆಗೆ ಸಂಚು ರೂಪಿಸಿದ್ದರು.

ಆರೋಪಿಗಳಿಂದ  42,700 ರೂ ನಗದು, 4 ಚಿನ್ನದ ಉಂಗುರ, 2 ಚಿನ್ನದ ಚೈನ್, 1 ನೆಕ್ಲೆಸ್, 1 ಕರಿಮಣಿ ಪದಕ, 2 ಚಿನ್ನದ ಬಳೆಗಳು ಕಪ್ಪುಮಣಿಗಳ್ಳುಳ ಬಳೆ, 1 ರಿವಾಲ್ವರ್, 2 ಲಾಂಗ್ ಕತ್ತಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.