ಒಂದೇ ಕುಟುಂಬದ ನಾಲ್ವರು ಆಸ್ಪತ್ರೆಗೆ

ಅಪಘಾತದಲ್ಲಿ ನುಜ್ಜುಗುಜ್ಜಾದ ಕಾರು

ಕಾರಿಗೆ ಹಾಲಿನ ಟ್ಯಾಂಕರ್ ಡಿಕ್ಕಿ

ನಮ್ಮ ಪ್ರತಿನಿಧಿ ವರದಿ

ಉಪ್ಪಿನಂಗಡಿ : ಕಾರೊಂದಕ್ಕೆ ಹಾಲಿನ ಟ್ಯಾಂಕರ್ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಒಂದೇ ಕುಟುಂಬದ ನಾಲ್ವರು ಗಾಯಗೊಂಡ ಘಟನೆ ಬೆಳ್ತಂಗಡಿ ತಾಲೂಕಿನ ಕರಾಯ ಎಂಬಲ್ಲಿ ಶನಿವಾರ ನಡೆದಿದೆ.

ಶೃಂಗೇರಿ ತಾಲೂಕಿನ ಕೊಪ್ಪದ ಹಿಮ್ಮರಹಳ್ಳಿ ನಿವಾಸಿಗಳಾದ ಶಂಕರಪ್ಪ (60), ಅವರ ಪತ್ನಿ ಕಮಲಾಕ್ಷಿ (55), ಮಗ ಶಶಿಕುಮಾರ (26) ಹಾಗೂ ಸೊಸೆ ಸುಷ್ಮಿತಾ (21) ಗಾಯಗೊಂಡವರು. ಶಂಕರಪ್ಪ ಕಳೆದ ಸುಮಾರು ಒಂದು ವರ್ಷದಿಂದ ಪುತ್ತೂರಿನ ವೈದ್ಯರೊಬ್ಬರಿಂದ ಚಿಕಿತ್ಸೆ ಪಡೆಯುತ್ತಿದ್ದು, ಶನಿವಾರ ಕೂಡಾ ಬೆಳಗ್ಗೆ ಮನೆಯಿಂದ ಕಾರಿನಲ್ಲಿ ಕುಟುಂಬ ಸಮೇತರಾಗಿ ಪುತ್ತೂರಿಗೆ ಹೊರಟಿದ್ದರು. ಆದರೆ ಕರಾಯ ಗ್ರಾಮದ ಕೊಲ್ಲಿ ಎಂಬಲ್ಲಿ ಇವರು ಪ್ರಯಾಣಿಸುತ್ತಿದ್ದ ಸ್ಯಾಂಟ್ರೋ ಕಾರಿಗೆ ಹಾಲಿನ ಟ್ಯಾಂಕರೊಂದು ಮುಖಾಮುಖಿ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಕಾರು ರಸ್ತೆಯಲ್ಲಿ ಸಂಪೂರ್ಣವಾಗಿ ತಿರುಗಿದ್ದು, ಬಂದತ್ತಲೇ ಮುಖ ಮಾಡಿ ನಿಂತಿದೆ. ಈ ಹಾಲಿನ ಟ್ಯಾಂಕರನ್ನು ಚಂದ್ರಶೇಖರ್ ಎಂಬವರು ಚಲಾಯಿಸುತ್ತಿದ್ದು, ಇದು ಉಪ್ಪಿನಂಗಡಿಯಿಂದ ಕೊಯ್ಯೂರಿಗೆ ತೆರಳುತ್ತಿತ್ತು. ಗಾಯಾಳುಗಳನ್ನು ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ಪೈಕಿ ಶಂಕರಪ್ಪ ಹಾಗೂ ಸುಷ್ಮಿತಾರ ಸ್ಥಿತಿ ಗಂಭೀರವಾಗಿದೆ. ಪುತ್ತೂರು ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.