ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಯತ್ನ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಉಪ್ಪಿನಂಗಡಿ : ಕೋಡಿಂಬಾಳ ಗ್ರಾಮದ ಪನ್ಯ ಎಂಬಲ್ಲಿ ತಾಯಿಯೊಬ್ಬಳು ತನ್ನ ಮೂವರು ಹೆಣ್ಣು ಮಕ್ಕಳಿಗೆ ವಿಷವುಣಿಸಿ ತಾನು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಜೀವನ್ಮರಣ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾದ ಘಟನೆ ಬುಧವಾರ ನಡೆದಿದೆ.

ಕೋಡಿಂಬಾಳ ಪನ್ಯ ನಿವಾಸಿ ಸುರೇಶ್ ಎಂಬವರ ಪತ್ನಿ ಕಮಲಾದೇವಿ (41) ಹಾಗೂ ಈಕೆಯ ಮೂವರು ಹೆಣ್ಣು ಮಕ್ಕಳಾದ ಸುಮನಾ (13), ಸಮೀಕ್ಷಾ (11), ಸುಷ್ಮಾ (6) ಆತ್ಮಹತ್ಯೆಗೆ ಯತ್ನಿಸಿದವರು.

ಪನ್ಯ ಶಾಲಾ ಬಳಿಯ ಜಾಗದಲ್ಲಿ ಗುಡಿಸಲು ನಿರ್ಮಿಸಿಕೊಂಡು ಜೀವನ ನಡೆಸುತ್ತಿದ್ದ ಈ ಕುಟುಂಬ ಪೆರಾಬೆ ಗ್ರಾಮದ ಕೇವಲ ಅಣ್ಣು ಶೆಟ್ಟಿ ಎಂಬವರ ರಬ್ಬರ್ ತೋಟದಲ್ಲಿ ಕಾರ್ಮಿಕರಾಗಿ ದುಡಿಯುತ್ತಿದ್ದರು. ಬುಧವಾರ ಗಂಡ ಮಕ್ಕಳೊಂದಿಗೆ ಪನ್ಯದ ಮನೆಗೆ ಬಂದಿದ್ದರು. ಪತಿ ಸುರೇಶ ಕಡಬ ಪೇಟೆಗೆ ಹೋದ ಬಳಿಕ ಕಮಲಾದೇವಿ ತನ್ನ ಮೂವರು ಮಕ್ಕಳಿಗೆ ವಿಷ ಉಣಿಸಿ ತಾನೂ ವಿಷ ಸೇವಿಸಿ ತನ್ನ ಗಂಡನಿಗೆ ದೂರವಾಣಿ ಕರೆ ಮಾಡಿ ನಾವೆಲ್ಲಾ ವಿಷ ಸೇವಿಸಿದ್ದೇವೆ ತಿಳಿಸಿದ್ದಾರೆ.

ತಕ್ಷಣ ಸುರೇಶ್ ಕಡಬದಿಂದ ರಿಕ್ಷಾದಲ್ಲಿ ಮನೆಗೆ ಬಂದಾಗ ನಾಲ್ವರು ಅಸ್ವಸ್ಥರಾಗಿದ್ದರು. ತಕ್ಷಣ ಕಡಬ ಸಮುದಾಯ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.ಆತ್ಮಹತ್ಯೆ ಯತ್ನಕ್ಕೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ. ಕಡಬ ಪೆÇಲೀಸರು ಪ್ರಕರಣ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.