ಒಂದೇ ಕುಟುಂಬದ ನಾಲ್ವರು ನೀರುಪಾಲು

ನಡ ಗ್ರಾಮದಲ್ಲಿ ನಡೆದ ದುರ್ಘಟನೆ

 

 

ನಮ್ಮ ಪ್ರತಿನಿಧಿ ವರದಿ
ಬೆಳ್ತಂಗಡಿ : ಐತಿಹಾಸಿಕ ಕಾಜೂರು ದರ್ಗಾದಲ್ಲಿ ಪ್ರಾರ್ಥನೆ ಸಲ್ಲಿಸಿ ಬಳಿಕ ಜಮಾಲಾಬಾದ್ ಕೋಟೆಯ ಗಡಾಯಿಕಲ್ಲು ವೀಕ್ಷಿಸಿ ಸ್ನಾನಕ್ಕೆ ನದಿಗಿಳಿದ ಒಂದೇ ಕುಟುಂಬದ ನಾಲ್ವರು ಮೃತಪಟ್ಟ ಹೃದಯ ವಿದ್ರಾವಕ ಘಟನೆ ತಾಲೂಕಿನ ನಡ ಗ್ರಾಮದಲ್ಲಿ ಬುಧವಾರ ಸಂಜೆ ನಡೆದಿದ್ದು, ದುರ್ಘಟನೆಯಲ್ಲಿ ಮುಳುಗಿದ್ದ ಇನ್ನೊಬ್ಬರು ಪವಾಡ ಸದೃಶ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಉಡುಪಿ ಜಿಲ್ಲೆಯ ಕಾಪು ಫಕೀರನಕಟ್ಟೆ ನಿವಾಸಿಗಳಾದ ರಹೀಮ್ (30), ಪತ್ನಿ ರುಬೀನಾ (25), ರುಬಿನಾರ ತಂಗಿ ಯಾಸಿನ್ (23) ತಮ್ಮ ಸುಬಾನ್ (15) ನಡ ಗ್ರಾಮದಲ್ಲಿ ನದಿ ನೀರಲ್ಲಿ ಮುಳುಗಿ ಮೃತಪಟ್ಟವರು.
ಬೆಳ್ತಂಗಡಿ ತಾಲೂಕಿನ ಇತಿಹಾಸ ಪ್ರಸಿದ್ಧ ಕಾಜೂರು ದರ್ಗಾಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿ ಬಳಿಕ ನಡ ಗ್ರಾಮದ ಗಡಾಯಿಕಲ್ಲು ವೀಕ್ಷಿಸಿ ಬಳಿಕ ಅದೇ ಪರಿಸರದಲ್ಲಿರುವ ನದಿಯಲ್ಲಿ ಸ್ನಾನಕ್ಕೆಂದು ಇಳಿದ ಸಂದರ್ಭ ದುರ್ಘಟನೆ ಸಂಭವಿಸಿದೆ.
ಗಡಾಯಿಕಲ್ಲು ವೀಕ್ಷಿಸಿದ ಬಳಿಕ ಸ್ಥಳೀಯ ಸೇತುವೆಯ ಪರಿಸರದಲ್ಲಿ ಸ್ನಾನಮಾಡಲು ನದಿಗೆ ಇಳಿದ ಒಂದೇ ಕುಟುಂಬದ ನಾಲ್ವರು ಒಬ್ಬರ ಬಳಿಕ ಇನ್ನೊಬ್ಬರಂತೆ ರಕ್ಷಿಸುವ ಪ್ರಯತ್ನದಲ್ಲಿ ಈಜು ಬಾರದೆ ಮೃತ ಪಟ್ಟಿರಬಹುದೆಂದು ಶಂಕಿಸಲಾಗಿದೆ.
ಮಧ್ಯಾಹ್ನ ಸುಮಾರು 2 ಗಂಟೆ ವೇಳೆಗೆ ನದಿ ಪರಿಸರದಲ್ಲಿ ಒಡಾಡುತ್ತಿದ್ದ ಇವರು ಸ್ನಾನಕ್ಕೆಂದು ನದಿಯಲ್ಲಿ ಇಳಿದಿದ್ದು ಸಾರ್ವಜನಿಕರು ನೋಡಿದ್ದರು. ಸ್ವdeath 1ಲ್ಪ ಹೊತ್ತಿನ ಬಳಿಕ ಸಮೀಪದ ತೋಟದಲ್ಲಿ ನೀರು ಹಾಕುತ್ತಿದ್ದ ಸ್ಥಳೀಯರಿಗೆ ಕಿರುಚಾಟ ಕೇಳಿಸಿತ್ತು. ತಕ್ಷಣವೇ ಸ್ಥಳಕ್ಕೆ ಧಾವಿಸಿದಾಗ ಮಹಿಳೆಯೊಬ್ಬರು ಮುಳುಗುತ್ತಿರುವ ದೃಶ್ಯ ಕಂಡುಬಂದಿದ್ದು ಕೂಡಲೇ ಈಕೆಯನ್ನು ನೀರಿನಿಂದ ಮೇಲಕ್ಕೆತ್ತಿದ್ದಾರೆ. ಕೂಡಲೇ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಿದ ಕಾರಣ ಇವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ದಡದಲ್ಲಿದ್ದ ಇದೇ ಕುಟುಂಬದ ಸಾಹಿನಾ ಎಂಬವರು ಮುಳುಗಿರುವವರ ಮಾಹಿತಿ ನೀಡಿದ್ದು, ಬಳಿಕ ನಾಲ್ವರ ಶವಗಳನ್ನು ಮೇಲಕ್ಕೆತ್ತಲಾಗಿದೆ.
ಮೃತಪಟ್ಟವರ ಪೈಕಿ ಮೈಮುನಾರ ಹಿರಿ ಮಗಳು ರುಬಿನಾ, ಅಳಿಯ ರಹೀಮ್, ಪುತ್ರ ಸುಬಾನ್, ಪುತ್ರಿ ಯಾಸಿನ್ ಆಗಿದ್ದಾರೆ. ಇನ್ನೊಬ್ಬ ಮಗಳು ಸಾಹಿನಾ ಮತ್ತು ರುಬಿನಾರ ಒಂದು ವರ್ಷದ ಮಗು, ಮಕ್ಕಳಾದ ಸೈಮ್ (4) ಮತ್ತು ಸುಹೈಲ್ (3) ಪಾರಾಗಿದ್ದಾರೆ.
ಮಾಹಿತಿ ತಿಳಿದಾಕ್ಷಣ ಸ್ಥಳಕ್ಕಾಗಮಿಸಿದ ಬೆಳ್ತಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಆಳವಿಲ್ಲದಿದ್ದರೂ ಕೈಕೈ ಹಿಡಿದುಕೊಂಡು
ಮುಳುಗಿದ್ದೇ ಸಾವಿಗೆ ಕಾರಣವಾಯಿತೇ ?

ಧಾವಿಸಿ ಬಂದವರು ಮಹಿಳೆಯನ್ನು ರಕ್ಷಿಸಿದ ಸ್ಥಳದಲ್ಲೇ ಮೃತದೇಹಗಳು ಪತ್ತೆಯಾಗಿದ್ದು, ಈ ಸ್ಥಳದಲ್ಲಿ ಮುಳುಗಿ ಸಾಯುವಷ್ಟು ಆಳದ ನೀರಿಲ್ಲದಿದ್ದರೂ ನಾಲ್ವರು ಹೇಗೆ ಶವವಾದರು ಎಂಬುದು ನಿಗೂಢವಾಗಿದೆ. ಇನ್ನೊಂದೆಡೆ ನಾಲ್ವರೂ ಪರಸ್ಪರ ಕೈ ಕೈ ಹಿಡಿದುಕೊಂಡೇ ಇದ್ದರೆಂಬುದು ಪ್ರತ್ಯಕ್ಷದರ್ಶಿಗಳಲ್ಲಿ ಅಚ್ಚರಿ ಮೂಡಿಸಿದೆ.
ಗಡಾಯಿಕಲ್ಲಿನ ಮೇಲೆ ಐತಿಹಾಸಿಕ ಜಮಲಾಬಾದ್ ಕೋಟೆ ಇರುವುದರಿಂದಲೂ ಇಲ್ಲಿನ ಪ್ರಕೃತಿ ರಮಣೀಯ ಪ್ರದೇಶಕ್ಕೆ ಮಳೆಗಾಲ ಹೊರತು ಪಡಿಸಿ ಬೇಸಿಗೆ, ಚಳಿಗಾಲದಲ್ಲಿ ಸ್ಥಳೀಯ ಚಾರಣ ಪ್ರಿಯರು, ಪ್ರವಾಸಿಗರು ಈಜಾಡಲು, ಬರುವುದು ಸಾಮಾನ್ಯವಾಗಿದ್ದು ಬಹುತೇಕ ಸಂದರ್ಭಗಳಲ್ಲಿ ಮಕ್ಕಳು, ಯುವಕರು ಬರುತ್ತಾರೆ. ಹಾಗೆ ಗುಂಪಾಗಿ ಬಂದವರು ಸ್ನಾನಕ್ಕೆ ನದಿಗಿಳಿದು ಮಜಾಕ್ಕೆ ಕಿರುಚಾಡುವುದೂ ಮಾಮೂಲು.
ಸೇತುವೆಯ ಸಮೀಪ ಕೆಲವು ಹಿಂದೂ-ಮುಸ್ಲಿಂ ಮನೆಗಳಿದ್ದು, ಬುಧವಾರ ದುರ್ಘಟನೆ ಬೆಳಕಿಗೆ ಬರುವ ಮುನ್ನ ಮೈಮುನಾ ಎಂಬುವರು ಬೊಬ್ಬೆ ಹಾಕಿದಾಗ ಸ್ಥಳೀಯರಿಗೆ ಕೇಳಿದ್ದರೂ ಇದು ಎಂದಿನಂತೆ ಇರುವುದೇ ಎಂದೇ ಭಾವಿಸಿ ಸ್ವಲ್ಪ ಹೊತ್ತು ನಿರ್ಲಕ್ಷಿಸಿದ್ದರು. ಆದರೆ ಮತ್ತೆ ಮತ್ತೆ ಮಹಿಳೆಯ ಕಿರುಚಾಟ ಕೇಳಿಬಂದಾಗ ಅದು ಜೀವನ್ಮರಣ ಹೋರಾಟದ ಕಿರುಚಾಟ ಎಂಬುದು ಸ್ಪಷ್ಟಗೊಂಡಾಗ ಸ್ಥಳೀಯರಾದ ಮೋಹನ ಗೌಡ ಬೇಚಾರು ಎಂಬವರು ಧಾವಿಸಿ ಬಂದು ನೀರಲ್ಲಿ ಜೀವನ್ಮರಣ ಹೋರಾಟದಲ್ಲಿದ್ದ ಮಹಿಳೆಯನ್ನು ರಕ್ಷಿಸಿದರು. ಇದೇ ವೇಳೆ ಮಹಿಳೆ ಇನ್ನೂ ನಾಲ್ವರು ನೀರಿನಲ್ಲಿ ಮುಳುಗಿದ್ದಾರೆ ಎಂದು ಮಾಹಿತಿ ನೀಡಿದಾಗ ಕೂಡಲೇ ಮೋಹನ ಗೌಡ, ಸುಂದರ ಗೌಡ, ಶ್ರೀಧರ ಮೊಯ್ಲಿ, ಶಾಮಸುಂದರ ಮತ್ತಿತರರು ಸೇರಿ ಶವಗಳನ್ನು ಮೇಲೆತ್ತಿದ್ದಾರೆ.