ನಾಲ್ವರು ಸ್ಪಾಟ್ ಡೆತ್

ಮೃತ ದುರ್ದೈವಿಗಳು, ಅಪಘಾತದಲ್ಲಿ ನುಜ್ಜುಗುಜ್ಜಾದ ಕಾರು

ಉಪ್ಪಳ ಸಮೀಪ ಭೀಕರ ರಸ್ತೆ ಅಪಘಾತ

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ಸ್ವಿಫ್ಟ್ ಕಾರು ಹಾಗೂ ಕಂಟೈನರ್ ಲಾರಿ ಪರಸ್ಪರ ಡಿಕ್ಕಿ ಹೊಡೆದು ಉಂಟಾದ ಅಪಘಾತದಲ್ಲಿ ತಂದೆ, ತಾಯಿ,ಪುತ್ರ ಹಾಗೂ ಆತನ ಸ್ನೇಹಿತ ಸೇರಿದಂತೆ ನಾಲ್ವರು ಘಟನಾ ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟ ಘಟನೆ ಉಪ್ಪಳ ಸಮೀಪದ ನಯಾ ಬಜಾರ್ ಎ ಜೆ ಆಂಗ್ಲ ಮಾಧ್ಯಮ ಶಾಲಾ ಮುಂಭಾಗದ ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ ಮುಂಜಾನೆ ಸಂಭವಿಸಿದೆ.

ಅಪಘಾತದಲ್ಲಿ ಕಾರಿನಲ್ಲಿದ್ದ ಕೇರಳ ತ್ರಿಶೂರು ಚೇಳಕ್ಕರ ನಿವಾಸಿಗಳಾದ ರಾಮನಾರಾಯಣ, ಪತ್ನಿ ವಲ್ಸಲ, ಪುತ್ರ ರತ್ನಜಿತ್ ಹಾಗೂ ಪುತ್ರನ ಸ್ನೇಹಿತ ನಿಥಿನ್ ಮೃತಪಟ್ಟಿದ್ದಾರೆ. ತ್ರಿಶೂರಿನಿಂದ ಮಂಗಳೂರು ಕಡೆ ಸಾಗುತ್ತಿದ್ದ ಕಾರು ಹಾಗೂ ಎದುರಿನಿಂದ ಟೈಲ್ಸನ್ನು ಕಣ್ಣೂರು ಕಡೆಗೆ ಸಾಗಿಸುತ್ತಿದ್ದ ಕಂಟೈನರ್ ಲಾರಿ ಪರಸ್ಪರ ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ.

ಅಪಘಾತದಿಂದ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದೆ. ಬಾಗಿಲಿನ ಗಾಜನ್ನು ಪುಡಿಗೈದು ಮೃತದೇಹವನ್ನು ಹೊರ ತೆಗೆಯಲಾಗಿದೆ. ಮೃತರ ಪೈಕಿ ರಂಜಿತ್ ಕರ್ನಾಟಕದ ಕೊಪ್ಪ ಎಸಿಎನ್ ಆಯುರ್ವೇದ ಕಾಲೇಜಿನ ವಿದ್ಯಾರ್ಥಿಯಾಗಿದ್ದಾನೆ.

ಕ್ರಿಸ್ಮಸ್ ರಜೆ ಕಳೆದು ಪುತ್ರನನ್ನು ಕಾಲೇಜಿಗೆ ಬಿಡಲು ತಂದೆ, ತಾಯಿ ಹಾಗೂ ಸ್ನೇಹಿತ ಜತೆಗೆ ಬರುತ್ತಿರುವ ದಾರಿ ಮಧ್ಯೆ ಈ ದುರ್ಘಟನೆ ಸಂಭವಿಸಿದೆ. ಮೃತದೇಹವನ್ನು ಮಂಗಲ್ಪಾಡಿ ಶವಗಾರದಲ್ಲಿ ಇರಿಸಲಾಗಿದೆ.