16 ವರ್ಷದ ಯುವಕನ ಕತ್ತು ಕತ್ತರಿಸಿದ ನಾಲ್ವರು ಅಪ್ರಾಪ್ತರು

ಸಾಂದರ್ಭಿಕ ಚಿತ್ರ

ದೆಹಲಿ : ತನ್ನ ಸ್ನೇಹಿತನ ಸೋದರ ಸಂಬಂಧಿಯೊಡನೆ ಯಾವುದೇ ಸ್ನೇಹ ಸಂಬಂಧ ಇರಿಸಿಕೊಳ್ಳುವಂತಿಲ್ಲ ಎಂಬ ಬೆದರಿಕೆಗೆ ಬಗ್ಗದೆ ತನ್ನ ಪ್ರೇಮ ಸಲ್ಲಾಪ ಮುಂದುವರೆಸಿದ್ದ 16 ವರ್ಷದ ಜತಿನ್ ಕೊನೆಗೂ ಹತ್ಯೆಗೀಡಾಗಿದ್ದಾನೆ. ದೆಹಲಿಯ ಕಂಜವಾಲಾದಲ್ಲಿ ನಡೆದ ಈ ಘಟನೆಯ ಹಿನ್ನೆಲೆಯಲ್ಲಿ ನಾಲ್ವರು ಅಪ್ರಾಪ್ತರನ್ನು ಪೊಲೀಸರು ಬಂಧಿಸಿದ್ದಾರೆ.

ಕಂಜವಾಲಾದ ತನ್ನ ಸ್ವಗೃಹದಲ್ಲಿ ಜತಿನ್ ಹತ್ಯೆಗೀಡಾಗಿದ್ದು, ಅವನ ಕತ್ತನ್ನು ಸೀಳಿ ಕೊಲ್ಲಲಾಗಿದೆ ಎಂದು ಪೊಲೀಸ್ ವರದಿಗಳು ತಿಳಿಸಿವೆ.  16-17 ವರ್ಷ ವಯಸ್ಸಿನ ನಾಲ್ವರು ಅಪ್ರಾಪ್ತರು ಜತಿನನನ್ನು ಕುರ್ಚಿಗೆ ಕಟ್ಟಿಹಾಕಿ ಈ ದುಷ್ಕøತ್ಯ ಎಸಗಿರಬಹುದು ಎಂದು ಶಂಕಿಸಲಾಗಿದೆ. ಜತಿನ್ ತನ್ನ ಸೋದರ ಸಂಬಂಧಿಯನ್ನು ಪ್ರೀತಿಸುತ್ತಿದ್ದುದು ತನಗೆ ಹಿಡಿಸಲಿಲ್ಲ ಹಾಗಾಗಿಯೇ ಕ್ರೂರ ರೀತಿಯಲ್ಲಿ ಹತ್ಯೆಮಾಡಲಾಗಿದೆ ಎಂದು ಬಂಧಿತರು ತಿಳಿಸಿದ್ದಾರೆ.

ಹುಡುಗಿಯ 16 ವರ್ಷದ ಸೋದರ ಮತ್ತವನ ಸ್ನೇಹಿತರು ಹತ್ಯೆಯ ಸಂಚು ರೂಪಿಸಿದ್ದು ಖಾಲಿಯಾಗಿದ್ದ ಮನೆಯೊಂದರಲ್ಲಿ ಈ ದುಷ್ಕøತ್ಯವನ್ನು ಎಸಗಿದ್ದಾರೆ. ಈ ಘಟನೆ ನಡೆದ ನಂತರ ಮತ್ತೊಬ್ಬ ಅಪ್ರಾಪ್ತ ಸ್ನೇಹಿತನಿಗೆ ವಿಷಯ ತಿಳಿಸಿ ಪರಾರಿಯಾಗಲು ಯತ್ನಿಸಿದ್ದಾರೆ. ಆದರೆ ವಿಷಯ ತಿಳಿದ ಸ್ನೇಹಿತ ಪೊಲೀಸ್ ವೃತ್ತಿಯಲ್ಲಿರುವ ತನ್ನ ತಂದೆಗೆ ವಿಷಯ ತಿಳಿಸಿದ ನಂತರ ಪೊಲೀಸರು ಆರೋಪಿಗಳ ಮನೆಗೆ ಭೇಟಿ ನೀಡಿ ಎಲ್ಲರನ್ನೂ ಬಂಧಿಸಿದ್ದಾರೆ. ಜತಿನನ ಕುಟುಂಬದವರೂ ಸಹ ತಮಗೆ ತಮ್ಮ ಮಗನ ಪ್ರೇಮ ವ್ಯವಹಾರ ತಿಳಿದಿರಲಿಲ್ಲ ಎಂದು ಹೇಳಿದ್ದಾರೆ. ಕಮಾಂಡೋ ಆಗುವ ಕನಸು ಕಾಣುತ್ತಿದ್ದ ಜತಿನ್ ಹತ್ತನೆ ತರಗತಿಯಲ್ಲಿ ಶೇ 57ರಷ್ಟು ಅಂಕ ಪಡೆದು ಸೇರ್ಪಡೆಯಾಗಿದ್ದ. ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿರುವ ಜತಿನನ ತಂದೆ ಜತಿನ್ ನಮ್ಮ ಕುಟುಂಬಕ್ಕೆ ಆಶಾಕಿರಣವಾಗಿದ್ದ ಎಂದು ಪರಿತಾಪ ವ್ಯಕ್ತಪಡಿಸುತ್ತಾರೆ.