ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ

ಕೊಕ್ಕಡ ಗ್ರಾಮದ ಆಲಡ್ಕ ಮನೆಯಲ್ಲಿ ಎಂಡೋಪೀಡಿತರ ದುರಂತ ಅಂತ್ಯ

ನಮ್ಮ ಪ್ರತಿನಿಧಿ ವರದಿ

ಬೆಳ್ತಂಗಡಿ : ಕೊಕ್ಕಡ ಗ್ರಾಮದ ಆಲಡ್ಕ ಮನೆಯ ಎಂಡೋಪೀಡಿತರನ್ನೊಳಗೊಂಡ ಒಂದೇ ಕುಟುಂಬದ ನಾಲ್ವರು ತಮ್ಮ ತೋಟದ ಕೆರೆಗೆ ಹಾರಿ ಸಾಮೂಹಿಕವಾಗಿ ಆತ್ಮಹತ್ಯೆಗೈದ ಮನಕಲಕುವ ಘಟನೆ ಕೊಕ್ಕಡ ಗ್ರಾಮದಲ್ಲಿ ಬುಧವಾರ ರಾತ್ರಿ ನಡೆದಿದೆ.

bel1

ಕೊಕ್ಕಡ ಗ್ರಾಮದ ಆಲಡ್ಕ ಎಂಬಲ್ಲಿನ ನಿವಾಸಿ ಕುಟುಂಬದ ಯಜಮಾನ ಬಾಬು ಗೌಡ (62), ಅವರ ಪತ್ನಿ ಗಂಗಮ್ಮ (55), ಹಿರಿಯ ಮಗ ಎಂಡೋಪೀಡಿತ ಸದಾನಂದ (35), ಎರಡನೇ ಮಗ ನಿತ್ಯಾನಂದ (28) ಈ ಆತಂಕಕಾರಿ ದುರ್ಘಟನೆಯಲ್ಲಿ ಮೃತಪಟ್ಟವರು.

ಮೃತರ ಪೈಕಿ ಬಾಬು ಗೌಡ, ಪತ್ನಿ ಗಂಗಮ್ಮ ಹಾಗೂ ಎಂಡೋಪೀಡಿತ ಪುತ್ರ ಸದಾನಂದ ಎಂಬವರ ಶವಗಳು ಮನೆ ಎದುರಿನ ಕೆರೆಯಲ್ಲಿ ಪತ್ತೆಯಾಗಿದ್ದು, ನಿತ್ಯಾನಂದರ ಮೃತದೇಹವು ನೆರೆ ಮನೆಯವರ ತೋಟದ ಕೆರೆಯಲ್ಲಿ ತೇಲುತ್ತಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಶವದಲ್ಲಿ ವಿಷದ ವಾಸನೆಯೂ ಕಂಡು ಬಂದಿದ್ದು, ಮದ್ಯಕ್ಕೆ ವಿಷ ಬೆರೆಸಿಕೊಂಡು ಕೆರೆಗೆ ಹಾರಿರಬಹದೆಂದು ಶಂಕಿಸಲಾಗಿದೆ. ಮೃತ ಬಾಬು ಗೌಡರ ಮೂವರು ಗಂಡು ಮಕ್ಕಳ ಪೈಕಿ ಕೊನೆಯ ಮಗ ದಯಾನಂದ ಹೆತ್ತವರು ಹಾಗೂ ಒಡಹುಟ್ಟಿದವರು ಸಾಮಾಹಿಕ ಆತ್ಮಹತ್ಯೆ ಮಾಡಿಕೊಳ್ಳುವ ಸಂದರ್ಭ ಮನೆಯಲ್ಲಿ ಇರದಿದ್ದ ಕಾರಣ ಬದುಕಿ ಉಳಿದಿದ್ದಾರೆ.

ಕೊಕ್ಕಡ ಭಾಗದಲ್ಲಿ ವ್ಯಾಪಕವಾಗಿ ಕಾಣಿಸಿಕೊಂಡಿರುವ ಎರಡು ಮೂರು ದಶಕಗಳ ಹಿಂದಿನ ಬಹುದೊಡ್ಡ ದುರಂತ ಎಂಡೋಸಲ್ಫಾನ್ ಸಿಂಪರಣೆಯೇ ಈ ಕುಟುಂಬದ ನೆಮ್ಮದಿಯನ್ನು ಕಿತ್ತುಕೊಂಡಿತ್ತು. ಎಂಡೋ ಸಿಂಪರಣೆಯ ದುಷ್ಪರಿಣಾಮಗಳಲ್ಲಿ ಮಾನಸಿಕ ಖಿನ್ನತೆ ಮತ್ತು ಮಾನಸಿಕ ಕಾಯಿಲೆಗಳು ಈ ಭಾಗದ ಹೆಚ್ಚಿನ ಕುಟುಂಬಗಳಲ್ಲಿ ತನ್ನ ಕಬಂಧ ಬಾಹುಗಳನ್ನು ಚಾಚಿಕೊಂಡಿದೆ. ಗುರುವಾರದಂದು ಬೆಳಗ್ಗೆ ನೆರೆ ಮನೆಯ ಗ್ರಾ ಪಂ ಸದಸ್ಯ ರವಿ ಎಂಬವರು ಪಕ್ಕದ ಮನೆಯಲ್ಲಿ ಬೆಳಗ್ಗಾದರೂ ಯಾರೂ ಏಳದೇ ಇರುವುದನ್ನು ಗಮನಿಸಿ ಮನೆಗೆ ಹೋಗಿ ಇಣುಕಿದ್ದು, ಬೀಗ ಹಾಕಿದ್ದ ಕಾರಣ ಸಮೀಪದ  ತೋಟದ ಕೆರೆ ಬಳಿ ಹೋಗಿ ನೋಡಿದಾಗ ಗಂಗಮ್ಮರ ಶವ ಕೆರೆಯಲ್ಲಿ ತೇಲುತ್ತಿರುವುದು ಕಂಡುಬಂದಿದೆ. ಘಟನೆ ಬೆಳಕಿಗೆ  ಬಂದ ಕೂಡಲೇ ದರ್ಮಸ್ಥಳ ಠಾಣೆಗೆ ಮಾಹಿತಿ ನೀಡಿದ್ದು, ಪೊಲೀಸರು ಕೂಡಲೇ ಘಟನಾ ಸ್ಥಳಕ್ಕೆ ಧಾವಿಸಿ ಬಂದಿದ್ದಾರೆ.

bel2

ಹಿರಿಯ ಮಗ ಸದಾನಂದ ಹುಟ್ಟಿನಿಂದಲೇ ಎಂಡೋಪೀಡಿತನಾಗಿ ಮಾನಸಿಕ ಅಸ್ವಸ್ಥನಾಗಿರುವುದು ಈ ಕುಟುಂಬದ ನೆಮ್ಮದಿಯನ್ನು ಶಾಶ್ವತವಾಗಿ ನುಂಗಿ ಹಾಕಿತ್ತು. ಬಾಬು ಗೌಡರ ಪತ್ನಿ ಗಂಗಮ್ಮ ಮಗನ ಅನಾರೋಗ್ಯದಿಂದ ಮಾನಸಿಕ ಖಿನ್ನತೆಗೊಳಗಾಗಿದ್ದು, ಉಳಿದ ಇಬ್ಬರು ಮಕ್ಕಳ ಪೈಕಿ ಕಿರಿಯ ಮಗ ದಯಾನಂದ ಮಂಗಳಮುಖಿ ವ್ಯಕ್ತಿತ್ವ ಹೊಂದಿದ್ದು ಮನೆಯಲ್ಲಿ ಎಲ್ಲವೂ ಇದ್ದರೂ ಊರು ಬಿಟ್ಟು ದೂರದ ಮಂಗಳೂರು ಮತ್ತಿತರ ಕಡೆಗಳಲ್ಲಿ ಸ್ತ್ರೀವೇಷ ಧರಿಸಿ ಹಣ ಸಂಪಾದನೆಯಲ್ಲಿ ತೊಡಗಿರುವುದೂ ಹೆತ್ತವರ, ಒಡಹುಟ್ಟಿದವರ ತೀವ್ರ ಚಿಂತೆಗೆ ಕಾರಣವಾಗಿತ್ತು.

ಎರಡು ವಾರದ ಹಿಂದೆ ಕೊಕ್ಕಡ ಕೋರಿ ಜಾತ್ರೆಯ ಸಂದರ್ಭ ಇದೇ ದಯಾನಂದ ಗ್ರಾಮಕ್ಕೂ ಬಂದು ಸ್ತ್ರೀವೇಷ ಧರಿಸಿ ಹಣ ಕೇಳುತ್ತಿದ್ದುದನ್ನು ನೋಡಿದ ತಂದೆ ಬಾಬು ಗೌಡ ತೀರಾ ಮನನೊಂದು ಮಾತನಾಡುತ್ತಿದ್ದರು ಎಂದು ಸ್ಥಳೀಯರು ವಿವರಿಸುತ್ತಾರೆ. ಮೂರು ಗಂಡು ಮಕ್ಕಳಲ್ಲಿ ಇಬ್ಬರು ಬೇರೆ ಬೇರೆ ರೀತಿಯ ವ್ಯಕ್ತಿತ್ವ ಹೊಂದಿದ್ದು, ಇನ್ನೊಬ್ಬ ಮಗ ನಿತ್ಯಾನಂದ ಆರೋಗ್ಯದಲ್ಲಿ ಚೆನ್ನಾಗಿದ್ದರೂ ಕೆಲವು ವರ್ಷಗಳ ಹಿಂದೆ ಬೈಕ್ ಅಪಘಾತದಲ್ಲಿ ಗಂಭೀರ ಗಾಯಗೊಂಡು ಕಠಿಣ ಕೆಲಸಗಳನ್ನು ಮಾಡಲು ಅಸಮರ್ಥನಾಗಿ ಅಶಕ್ತನಾಗಿದ್ದ. ತನ್ನ ಮೂವರು ಮಕ್ಕಳಲ್ಲಿ ಒಬ್ಬರೂ ದೈಹಿಕವಾಗಿ ಆರೋಗ್ಯವಂತರಲ್ಲ ಎಂಬ ಗಾಢ ಚಿಂತೆ ಮನೆಯ ಯಜಮಾನ ಬಾಬು ಗೌಡ ಅವರಲ್ಲಿ ಖಿನ್ನತೆ ಕಾಡಲು ಕಾರಣವಾಗಿತ್ತು.

ಕೆರೆಯಲ್ಲಿ ಗಂಗಮ್ಮ ಅವರ ಶವ ಮಾತ್ರ ತೇಲುತ್ತಿರುವುದು ಮತ್ತು ಮನೆಗೆ ಬೀಗ ಹಾಕಿರುವುದನ್ನು ಗಮನಿಸಿದ ಧರ್ಮಸ್ಥಳದ ಪೊಲೀಸರು ಕೆರೆಯಲ್ಲಿ ತೇಲುತ್ತಿದ್ದ ಶವವನ್ನು ಮೇಲಕ್ಕೆತ್ತಿ ಬಳಿಕ ಮುಳುಗುಗಾರರನ್ನು ಕರೆಸಿ ಮತ್ತೆ ಹುಡುಕಾಡಿದಾಗ ಅದೇ ಕೆರೆಯಲ್ಲಿ ಬಾಬು ಗೌಡ ಮತ್ತು ಹಿರಿಯ ಮಗ ಸದಾನಂದರ ಶವ ಹಾಗೂ ನೆರೆಮನೆಯ ತೋಟದಲ್ಲಿ ನಿತ್ಯಾನಂದರ ಮೃತದೇಹ ಪತ್ತೆಯಾಗಿದೆ.

ಸ್ಥಳೀಯ ಮುಳುಗಾರರಾದ ಜನಾರ್ದನ ಕೆ ಪಿ, ಮೂಸೆ ಸೌತಡ್ಕ ಎಂಬವರು ಶವಗಳನ್ನು ಕೆರೆಯಿಂದ ಮೇಲಕ್ಕೆತ್ತಲು ಸಹಕರಿಸಿದರು. ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದುರ್ಘಟನೆ ತಪ್ಪಿಸಬಹುದಿತ್ತೇ ?

ಆತ್ಮಹತ್ಯೆಗೈದ ಕುಟುಂಬದ ಯಜಮಾನ ಬಾಬು ಗೌಡ ವಾರದ ಹಿಂದೆಯಷ್ಟೆ ಮನೆಯ ದುರಂತಮಯ ಕುಟುಂಬದ ಬದುಕನ್ನು ನೆನೆದು, ಮಾನಸಿಕವಾಗಿ ತೀವ್ರ ನೊಂದು ಕೆರೆಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದಿದ್ದರು ಎಂಬ ವಿಚಾರ ಇದೀಗ ಸ್ಥಳೀಯರಿಂದ ಬೆಳಕಿಗೆ ಬಂದಿದೆ.

ಮನೆಯ ಯಜಮಾನ ಬಾಬು ಗೌಡ ತನ್ನ ಕುಟುಂಬದ ದುಃಸ್ಥಿತಿ ಬಗ್ಗೆ, ಮನೆಯಲ್ಲಿ ಪತ್ನಿ, ಮಕ್ಕಳೆಲ್ಲಾ ಮಾನಸಿಕವಾಗಿ ದುರ್ಬಲಗೊಂಡಿರುವ ಬಗ್ಗೆ ಪದೇಪದೇ ಪಕ್ಕದ ಮನೆಯವರಲ್ಲಿ ಹೇಳಿಕೊಳ್ಳುತ್ತಿದ್ದರು. ಹಾಗೆ ಮುಂದುವರಿದು ಜೀವನದಲ್ಲಿ ಜಿಗುಪ್ಸೆಗೊಂಡು ವಾರದ ಹಿಂದೆ ಆತ್ಮಹತ್ಯೆ ಉದ್ದೇಶದಲ್ಲಿ ತನ್ನ ಮನೆ ಸಮೀಪದ ಓಣಿತ್ತಾರು ಸಂಜೀವ ನಾಯ್ಕ ಎಂಬವರ ತೋಟದ ಕೆರೆಗೆ ಹಾರಿದ್ದರೂ ಬಳಿಕ ಕೆರೆಗೆ ಇಳಿಸಲಾಗಿದ್ದ ಫುಟ್ ವಾಲ್ ಪೈಪ್ ಆಧಾರದಿಂದ ರಕ್ಷಣೆ ಪಡೆದು ತಾವೇ ಮೇಲೆ ಹತ್ತಿ ಬಂದಿದ್ದರು.

ಒದ್ದೆ ಬಟ್ಟೆಯಲ್ಲೆ ಮನೆಗೆ ಬಂದ ಬಳಿಕ ತನ್ನ ಹಿರಿಮಗನ ಮಾನಸಿಕ ಕಾಯಿಲೆಗೆ ವೈದ್ಯರು ನೀಡಿದ್ದ ನಿದ್ರೆ ಗುಳಿಗೆಗಳನ್ನು ನುಂಗಿ ತೀವ್ರ್ರ ಅಸ್ವಸ್ಥರಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಎರಡು ದಿನ ಚಿಕಿತ್ಸೆ ಪಡೆದಿದ್ದರು. ಬಳಿಕ ಸಂಬಂಧಿಕರು, ನೆರೆಮನೆಯವರು ಸ್ವಲ್ಪ ಮಟ್ಟಿಗೆ ಸಾಂತ್ವನ, ಧೈರ್ಯ ನೀಡಿದರೂ ಅವರು ಮಾನಸಿಕ ಖಿನ್ನತೆಯಿಂದ ಚೇತರಿಸಿಕೊಳ್ಳದೆ ಇದೀಗ ಸಾಮೂಹಿಕ ಆತ್ಮಹತ್ಯೆಯ ಹಾದಿ ಹಿಡಿದಿದ್ದಾರೆ.

ಸೂಕ್ತ ಸಂದರ್ಭದಲ್ಲಿ ಮನೋವೈದ್ಯರಿಂದ ಆಪ್ತ ಸಲಹೆ/ಚಿಕಿತ್ಸೆ ನೀಡಿ ಮಾನಸಿಕ ಧೈರ್ಯ ಕೊಟ್ಟಿದ್ದರೆ ಬಾಬು ಗೌಡ ಕುಟುಂಬದ ಸಾಮೂಹಿಕ ಆತ್ಮಹತ್ಯೆ ತಪ್ಪಿಸಬಹುದಿತ್ತೇನೋ ಎಂದು ಇದೀಗ ಸ್ಥಳೀಯರು ಹೇಳುತ್ತಿದ್ದಾರೆ.