18 ಜಾನುವಾರು ಸಹಿತ ನಾಲ್ವರು ಕೇರಳಿಗರ ಸೆರೆ

ನಮ್ಮ ಪ್ರತಿನಿಧಿ ವರದಿ

ಯಲ್ಲಾಪುರ : ಅಕ್ರಮವಾಗಿ, ಹಿಂಸಾತ್ಮಕ ರೀತಿಯಲ್ಲಿ ಜಾನುವಾರುಗಳನ್ನು ಸಾಗಿಸುತ್ತಿದ್ದ ಲಾರಿಯನ್ನು ತಡೆದು 18 ಜಾನುವಾರುಗಳನ್ನು ಪೊಲೀಸರು ವಶಪಡಿಸಿಕೊಂಡ ಘಟನೆ ಪಟ್ಟಣದಲ್ಲಿ ಬುಧವಾರ ನಡೆದಿದೆ. ಈ ಸಂಬಂಧ ನಾಲ್ವರನ್ನು ಬಂಧಿಸಲಾಗಿದೆ. ಬಂಧಿತರನ್ನು ಕಾಸರಗೋಡು ಕೇರಳ ನಿವಾಸಿ ಲಾರಿ ಚಾಲಕ ಜಲೀಲ್ ಎಂ ಹಮೀದ್ (49), ಇನ್ನೊಬ್ಬ ಚಾಲಕ ಕೆ ಬಾಲ ಅಂಬು (48), ಅಹ್ಮದ್ ಕಬೀರ್ ಅಬ್ದುಲ್ಲಾ (30) ಹಾಗೂ ಸಮೀರ್ ಮಹ್ಮದ್ (32) ಎಂದು ಗುರುತಿಸಲಾಗಿದೆ. ಇವರು ಮಹಾರಾಷ್ಟ್ರದ ಕೊಲ್ಲಾಪುರದಿಂದ ಕೇರಳದ ಕಾಸರಗೋಡಿನ ವಧಾಗ್ರಹಕ್ಕೆ ಮಾಂಸಕ್ಕಾಗಿ ಕಡಿಯಲು ಹಿಂಸಾತ್ಮಕ ಹಾಗೂ ಕಾನೂನುಬಾಹಿರವಾಗಿ 18 ದಷ್ಟಪುಷ್ಟ ಕೋಣಗಳನ್ನು ಸಾಗಿಸುತ್ತಿದ್ದರು ಎನ್ನಲಾಗಿದೆ. ಈ ವೇಳೆ ದಾಳಿ ನಡೆಸಿದ ಪೊಲೀಸರು ಲಾರಿ ಸಹಿತ ಜಾನುವಾರುಗಳನ್ನು ವಶಪಡಿಸಿಕೊಂಡು 4 ಜನ ಆರೋಪಿತರನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಿದ್ದಾರೆ.