ಕಿನ್ನಿಗೋಳಿ ಸ್ಟುಡಿಯೋಕ್ಕೆ ಬೆಂಕಿ, ನಾಲ್ವರು ಗಂಭೀರ

ಸಿಲಿಂಡರ್ ಸ್ಫೋಟಿಸಿ ಕಂಗಾಲಾದ ಜನ

ಮುಲ್ಕಿ : ಕಿನ್ನಿಗೋಳಿ ಬಸ್ಸು ನಿಲ್ದಾಣದ ಮೇಲಿನ ಬದಿಯಲ್ಲಿರುವ ಕಿನ್ನಿಗೋಳಿ-ಮೂಡಬಿದ್ರೆ ಹೆದ್ದಾರಿಗೆ ಪಕ್ಕದಲ್ಲಿದ್ದ ಸ್ಟುಡಿಯೋಗೆ ಆಕಸ್ಮಿಕ ಬೆಂಕಿ ತಗುಲಿ ಸಂಪೂರ್ಣ ಭಸ್ಮವಾಗಿದ್ದು ಈ ಸಂದರ್ಭ ಅಂಗಡಿಯಲ್ಲಿದ್ದ ಅಡುಗೆ ಅನಿಲದ ಸಿಲಿಂಡರ್ ಸ್ಪೋಟಗೊಂಡಿದೆ.

ಸ್ಥಳೀಯರು  ಬೆಂಕಿ ನಂದಿಸಲು ಪ್ರಯತ್ನ ಪಟ್ಟರೂ ಫಲಕಾರಿಯಾಗದೆ ಬೆಂಕಿಯ ಕೆನ್ನಾಲಿಗೆ  ಹರಡಿದೆ. ಘಟನೆ ನಡೆದ ಸುಮಾರು ಒಂದು ತಾಸು ಬಳಿಕ ಅಗ್ನಿಶಾಮಕ ದಳ ಸ್ಥಳಕ್ಕೆ ಬಂದಿದ್ದು ಬೆಂಕಿ ನಂದಿಸಲು ಪ್ರಯತ್ನಿಸಿದೆ.ಸ್ಟುಡಿಯೋದ ಒಳಗಡೆ ಇರುವ ಮೇಲಂತಸ್ತಿನಲ್ಲಿ ಹೋಗಿ ಬೆಂಕಿ ನಂದಿಸುವ ಭರದಲ್ಲಿದ್ದಾಗ ಅಗ್ನಿಶಾಮಕ ದಳದ ಸಿಬ್ಬಂದಿಗಳಿಬ್ಬರು ಬೆಂಕಿ ತಗುಲಿ ಗಂಭೀರ ಗಾಯಗೊಂಡಿದ್ದಾರೆ ಹಾಗೂ ಬೆಂಕಿ ನಂದಿಸಲು ಪ್ರಯತ್ನಿಸಿದ ಇಬ್ಬರು ಸ್ಥಳೀಯರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಗಾಯಗೊಂಡವರನ್ನು ಕಿನ್ನಿಗೋಳಿ ಕಾಪಿಕಾಡು ನಿವಾಸಿಯಾದ ಸಂದೀಪ, ರಾಕಿ ಡಿಸೋಜ ಕಿನ್ನಿಗೋಳಿ, ಇಬ್ರಾಹಿಂ, ಅಬ್ದುಲ್ ಬಷೀರ್ ಗುತ್ತಕಾಡು ಎಂದು ಗುರುತಿಸಲಾಗಿದ್ದು ಅಗ್ನಿಶಾಮಕದಳದ ಸಿಬ್ಬಂದಿಗಳಾದ ಎಂ ಕೇಶವ, ಅಬ್ದುಲ್ ಹಮೀದ್ ಕೂಡ ತೀವ್ರ ಗಾಯಗೊಂಡು ಕಿನ್ನಿಗೋಳಿ ಕಾನ್ಸೆಟ್ಟಾ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಗ್ನಿದುರಂತದಿಂದ ಲಕ್ಷಾಂತರ ರೂ ನಷ್ಟ ಸಂಭವಿಸಿದೆ ಭಾನುವಾರ ಸಂಜೆ 8 ಗಂಟೆ ಸುಮಾರಿಗೆ ಘಟನೆ ನಡೆದಿದ್ದು ಕಿನ್ನಿಗೋಳಿ ಪರಿಸರದ ನಾಗರಿಕರು ಕ್ರಿಕೆಟ್ ಪಂದ್ಯಾಟದಲ್ಲಿ ಭಾರತದ ಸೋಲಿನ ಬಗ್ಗೆ ಪರಾಮರ್ಶೆ ನಡೆಸುತ್ತಿದ್ದರು. ಈ ಸಂದರ್ಭ ಕಿನ್ನಿಗೋಳಿ ಬಸ್ಸು ನಿಲ್ದಾಣದ ಬಳಿಮೇಲಿನ ಬದಿಯಲ್ಲಿರುವ ಪುರಾತನ ಕಾಲದ ಶೇಷಪ್ಪ ಪೂಜಾರಿ ಮಾಲಕತ್ವದ ಪ್ರತಿಮಾ ಸ್ಟುಡಿಯೋಗೆ ಶಾರ್ಟ್ ಸಕ್ರ್ಯೂಟಿನಿಂದ ಆಕಸ್ಮಿಕ ಬೆಂಕಿ ತಗುಲಿದೆ. ಏನಾಯಿತು ಎಂದು ನೋಡುವಷ್ಟರಲ್ಲಿ ಬೆಂಕಿ ಕೆನ್ನಾಲಿಗೆಯಂತೆ ಸ್ಟುಡಿಯೋ ವ್ಯಾಪಿಸಿದೆ ಎಂದು ಸ್ಥಳೀಯ ನೆರೆಮನೆವಾಸಿ ಶಾಲೆಟ್ ಪಿಂಟೋ ಹೇಳುತ್ತಾರೆ.

“ಕೂಡಲೇ ನಾವು ಅಗ್ನಿಶಾಮಕ ದಳಕ್ಕೆ ದೂರವಾಣಿ ಮಾಡಿದೆವು. ಆ ಹೊತ್ತಿಗೆ ಸ್ಟುಡಿಯೋ ಒಳಗಿದ್ದ ಖಾಲಿ ಅಡುಗೆ ಅನಿಲ ಸಿಲಿಂಡರಿಗೆ ಬೆಂಕಿ ಹತ್ತಿ ಸ್ಪೋಟಗೊಂಡು ಭೀಕರ ಸದ್ದು ಉಂಟಾದಾಗ ಸ್ಥಳದಲ್ಲಿ ಬೆಂಕಿ ಆರಿಸಲು ಬಂದಿದ್ದ ನಾಗರಿಕರು ಹೆದರಿಕೆಯಿಂದ  ಚೆಲ್ಲಾಪಿಲ್ಲಿಯಾಗಿ ಓಡಿದ್ದಾರೆ” ಎಂದರು.

ಒಂದು ತಾಸಿನ ಬಳಿಕ ಮಂಗಳೂರು ಕಡೆಯಿಂದ ಎರಡು ವಾಹನ ಬಂದಿದೆ. ಬಳಿಕ ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದಾಗ ಇಬ್ಬರು ಘಟಕದ ಸಿಬ್ಬಂದಿಗಳಿಗೆ ಹಾಗೂ ಸ್ತಳೀಯ ನಾಗರಿಕರಿಗೆ ಗಂಬೀರ ಗಾಯಗಳಾಗಿದ್ದು ಕೂಡಲೇ ಕಿನ್ನಿಗೋಳಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ನಡುವೆ ಘಟನೆ ನಡೆದ ಬಳಿಕ ವಿದ್ಯುತ್ ಕೂಡ ಕೈಗೊಟ್ಟಿದ್ದರಿಂದ ಸ್ಥಳೀಯರು ಬೆಂಕಿ ನಂದಿಸಲು ಪರದಾಡಬೇಕಾಯಿತು.

ಬದಿಯಲ್ಲಿರುವ ಸತೀಶ್ ರಾವ್ ಮಾಲಕತ್ವದ ಬೇಕರಿಗೂ ಹಾನಿಯಾಗಿದ್ದು ಬೇಕರಿಯ ವಸ್ತುಗಳನ್ನು ಸ್ಥಳಾಂತರಗೊಳಿಸಲಾಗಿದೆ.