ಸರಣಿ ಅಪಘಾತ : 4 ಮಂದಿ ಆಸ್ಪತ್ರೆಗೆ

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ವಾಹನಗಳು ಪರಸ್ಪರ ಡಿಕ್ಕಿ ಹೊಡೆದ ಸರಣಿ ಅಪಘಾತದಲ್ಲಿ ನಾಲ್ಕು ಮಂದಿ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಪೈಕಿ ಎರಡು ವರ್ಷದ ಬಾಲಕಿಯೊಬ್ಬಳು ಪ್ರಾಣಾಪಾಯದಿಂದ ಪಾರಾದ ಘಟನೆ ಉಪ್ಪಳ ಭಗವತಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುರುವಾರ ಸಂಜೆ ನಾಲ್ಕು ಗಂಟೆ ಸುಮಾರಿಗೆ ಸಂಭವಿಸಿದೆ.

ಕಾಸರಗೋಡಿನಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಸ್ವಿಪ್ಟ್ ಕಾರು ಹಾಗೂ ಮಂಗಳೂರಿನಿಂದ ಉಪ್ಪಳ ಭಾಗಕ್ಕೆ ಆಗಮಿಸುತ್ತಿದ್ದ ಟವೇರ ಕಾರು ಪರಸ್ಪರ ಡಿಕ್ಕಿ ಹೊಡೆದಿದೆ.

ಈ ಸಂದರ್ಭ ಟವೇರ ಕಾರಿನ ಹಿಂಬಾಗದಲ್ಲಿದ್ದ ಓಮ್ನಿ ಚಾಲಕನ ನಿಯಂತ್ರಣ ತಪ್ಪಿ ಟವೇರ ಕಾರಿನ ಹಿಂಬದಿಗೆ ಡಿಕ್ಕಿ ಹೊಡೆದಿದೆ.

ಇನ್ನೊಂದು ವಾಹನವನ್ನು ಓವರ್ಟೇಕ್ ಮಾಡಿಕೊಂಡು ಅಮಿತ ವೇಗದಲ್ಲಿ ಅಗಮಿಸಿದ ಸ್ವಿಪ್ಟ್ ಕಾರು ಅಪಘಾತಕ್ಕೆ ಕಾರಣವೆಂಬುದಾಗಿ ಪ್ರತ್ಯಕ್ಷ ದರ್ಶಿಗಳಿಂದ ತಿಳಿದುಬಂದಿದೆ.

ಅಪಘಾತದಲ್ಲಿ ಸ್ವಿಫ್ಟ್ ಕಾರು ಚಾಲಕ ಆರಿಕ್ಕಾಡಿ ನಿವಾಸಿ ಮೊಹಮ್ಮದ್ (52) ಹಾಗೂ ಓಮ್ನಿಲ್ಲಿದ್ದ ಕರ್ನಾಟಕದ ಉಳ್ಳಾಲ ನಿವಾಸಿಗಳ ಸಹಿತ ನಾಲ್ವರು ಗಾಯಗೊಂಡಿದ್ದಾರೆ. ಇವರನ್ನು ಸಮೀಪದ ಆಸ್ಪತ್ರೆಗೆ ಸಾಗಿಸಲಾಗಿದೆ. ಓಮ್ನಿಯಲ್ಲಿದ್ದ ಎರಡು ವರ್ಷದ ಬಾಲಕಿಯೊಬ್ಬಳು ರಸ್ತೆಗೆ ಎಸೆಯಲ್ಪಟ್ಟಿದ್ದರೂ ಯಾವುದೇ ಗಾಯಗಳಿಲ್ಲದೆ ಪಾರಾಗಿದೆ. ಅಪಘಾತದಿಂದ ವಾಹನಗಳು ಜಖಂಗೊಂಡಿವೆ.