ದನದ ಮಾಂಸ ಸಹಿತ ನಾಲ್ವರು ಹಿಂದೂಗಳ ಸೆರೆ

ನಮ್ಮ ಪ್ರತಿನಿಧಿ ವರದಿ
ಬೆಳ್ತಂಗಡಿ : ಹಿಂದೂ ವ್ಯಕ್ತಿಯೊಬ್ಬನ ಮನೆಯಲ್ಲೇ ನಡೆಯುತ್ತಿದ್ದ ಅಕ್ರಮ ಕಸಾಯಿಖಾನೆಯನ್ನು ಪತ್ತೆ ಹಚ್ಚಿದ ಧರ್ಮಸ್ಥಳ ಪೊಲೀಸರು ಮಾರಾಟಕ್ಕಾಗಿ ಸಾಗಾಟ ನಡೆಸಲಾಗುತ್ತಿದ್ದ ಗೋಮಾಂಸ ಸಹಿತ ಕಳೆಂಜ ಗ್ರಾಮದ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಕಳೆಂಜ ಗ್ರಾಮದ ಕಾಯರ್ತಡ್ಕ ಸನಿಹದ ಕೆಳಗಿನ ಬಂಡೇರಿ ಎಂಬಲ್ಲಿನ ನಿವಾಸಿ ವಿಶ್ವನಾಥ ಗೌಡ ಎಂಬವರ ಮನೆಯಲ್ಲಿ ನಡೆಯುತ್ತಿದ್ದ ಅಕ್ರಮ ಕಸಾಯಿಖಾನೆಯನ್ನು ಖಚಿತ ಮಾಹಿತಿ ಆಧಾರದಲ್ಲಿ ಧರ್ಮಸ್ಥಳ ಪೊಲೀಸರು ಪತ್ತೆ ಹಚ್ಚಿದ್ದು, ಮನೆಯಲ್ಲೇ ರಹಸ್ಯವಾಗಿ ನಡೆಯುತ್ತಿದ್ದ ಕಸಾಯಿಖಾನೆಯಲ್ಲಿ ಗೋವನ್ನು ಹತ್ಯೆಗೈದು ಮಾಂಸವನ್ನು ಮಾರಾಟಕ್ಕಾಗಿ ರಿಕ್ಷಾದಲ್ಲಿ ಸಾಗಾಟ ನಡೆಸುತ್ತಿದ್ದ ವಿಶ್ವನಾಥ ಗೌಡ, ಕಿಟ್ಟು ಮೊಗೇರ, ಜೋಸೆಫ್ ಸಿ ವಿ, ಜೋನ್ ಕೆ ವಿ ಎಂಬ ನಾಲ್ವರು ಆರೋಪಿಗಳನ್ನು ಗೋಮಾಂಸದ ಸಹಿತ ಬಂಧಿಸಿದ್ದಾರೆ.
ವಿಶ್ವನಾಥ ಗೌಡರ ಮನೆಯಲ್ಲೇ ಕೆಲ ಸಮಯಗಳಿಂದ ಅಕ್ರಮ ಕಸಾಯಿಖಾನೆ ನಡೆಯುತ್ತಿದ್ದು, ಆರೋಪಿಗಳು ಸುತ್ತಮುತ್ತಲಿನ ಊರುಗಳಿಗೆ ಗೋಮಾಂಸ ತಲುಪಿಸಿ ವ್ಯಾಪಾರ ಮಾಡುತ್ತಿದ್ದರು.
ಈ ಬಗ್ಗೆ ಸ್ಥಳೀಯರು ಹಾಗೂ ಹಿಂದೂ ಸಂಘಟನೆಯ ಕಾರ್ಯಕರ್ತರು ಕಣ್ಣಿಟ್ಟಿದ್ದು ವಿಶ್ವನಾಥ ಗೌಡ ತಮ್ಮ ಸ್ವಂತ ಅಟೋ ರಿಕ್ಷಾದಲ್ಲಿ ಗೋಮಾಂಸ ಸಾಗಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿಯನ್ನು ಧರ್ಮಸ್ಥಳ ಪೊಲೀಸರಿಗೆ ನೀಡಿದ್ದ ಹಿನ್ನೆಲೆಯಲ್ಲಿ ಧರ್ಮಸ್ಥಳ ಪೊಲೀಸರು ಕಾರ್ಯಾಚರಣೆ ನಡೆಸಿ ಪ್ರಕರಣ ಬಯಲಿಗೆಳೆದಿದ್ದಾರೆ.
ಕೃತ್ಯವೆಸಗಿದ ನಾಲ್ವರೂ ಆರೋಪಿಗಳನ್ನು ಬಂಧಿಸಿದ ಧರ್ಮಸ್ಥಳ ಪೊಲೀಸರು ಮಾರಾಟಕ್ಕೆ ಸಿದ್ಧವಾಗಿದ್ದ ಗೋಮಾಂಸ, ರಿಕ್ಷಾ ಮತ್ತಿತರ ವಸ್ತುಗಳನ್ನು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.