ಹಾಸನದ ಶಾಂತಿ ನಗರದಲ್ಲಿ ಭೀಕರ ಅಪಘಾತ

ಬೆಳ್ತಂಗಡಿಯ ನಾಲ್ವರ ದಾರುಣ ಸಾವು

ನಮ್ಮ ಪ್ರತಿನಿಧಿ ವರದಿ

ಬೆಳ್ತಂಗಡಿ : ಬೆಂಗಳೂರು-ಧರ್ಮಸ್ಥಳ ಕೆಎಸ್ಸಾರ್ಟಿಸಿ ಐರಾವತ ಬಸ್ಸೊಂದು ಚಾಲಕನ ಅಜಾಗರೂಕತೆಯ ಚಲಾವಣೆಯ ಪರಿಣಾಮ ಹಾಸನ ಸಕಲೇಶಪರ ಸಮೀಪದ ಶಾಂತಿಗ್ರಾಮದಲ್ಲಿ ಶನಿವಾರ ಮುಂಜಾನೆ ತಾಲೂಕಿನ ಒಂದೇ ಕುಟುಂಬಕ್ಕೆ ಸೇರಿದ ಮೂವರು ಸೇರಿದಂತೆ ನಾಲ್ವರು ದಾರುಣ ಮೃತಪಟ್ಟಿದ್ದಾರೆ.

ನೆರಿಯಾ ಗ್ರಾಮದ ಗಂಡಿಬಾಗಿಲು ಸಮೀಪ ದೇವಗಿರಿಯ ಪುತ್ತೊಟ್ಟು ಪೊರವಿಲ್ ಬೇಬಿ ದೇವಸ್ಯ ಎಂಬವರ ಪುತ್ರ ಬಿಜೋ ಜಾರ್ಜ್ (26), ವಿನು ತೋಮಸ್ ಎಂಬವರ ಪತ್ನಿ ಸೋನಿಯಾ (25) ಹಾಗೂ ಪಿ ಡಿ ದೇವಸ್ಯ ಎಂಬವರ ಪುತ್ರಿ ಡಯಾನಾ (20) ಮೃತಪಟ್ಟವರು. ಈ ಮೂವರು ಮೃತರು ಒಂದೇ ಕುಟುಂಬಕ್ಕೆ ಸೇರಿದ್ದು, ಇನ್ನೊಬ್ಬ ಧರ್ಮಸ್ಥಳ ಗ್ರಾಮದ ಕನ್ಯಾಡಿ ರಾಮಂದಿರ ಸಮೀಪದ ನಿವಾಸಿ ದಿ ರಾಮದಾಸ ಪ್ರಭು ಎಂಬವರ ಪುತ್ರ ರಾಕೇಶ್ ಪ್ರಭು ಮೃತ ದುರ್ದೈವಿ.

ನೆರಿಯಾ ಗ್ರಾಮದ ದೇವಗಿರಿ ನಿವಾಸಿಗಳಾದ ವಿನು ತೋಮಸ್, ಸೋನಿಯಾ, ಬಿಜೋ ಜಾರ್ಜ್, ಡಯಾನ ಅವರು ಒಂದೇ ಕುಟುಂಬಕ್ಕೆ ಸೇರಿದವರು. ಇವರು ದೇವಗಿರಿ ಸೈಂಟ್ ಜೂಡು ಚರ್ಚಿನಲ್ಲಿ ಶನಿವಾರ ಹಾಗೂ ಭಾನುವಾರ ನಡೆಯುವ ಸಾಂತ್ ಮೇರಿ ಹಬ್ಬಕ್ಕೆಂದು  ಐರಾವತ ಬಸ್ಸಿನಲ್ಲಿ ಊರಿಗೆ ಹೊರಟಿದ್ದರು.

ಇತ್ತ ತಾಯಿ ಹಾಗೂ ಬಾಣಂತಿ ಸಹೋದರಿಯನ್ನು ನೋಡಲೆಂದು ರಾಕೇಶ್ ಇದೇ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದರು. ದಾರಿ ಮಧ್ಯೆ ಹಾಸನದ ಸಮೀಪ ಶಾಂತಿಗ್ರಾಮದ ಬಳಿ ಚಾಲಕನ ಅಜಾಗರೂಕತೆಯಿಂದ ನಿಯಂತ್ರಣ ತಪ್ಪಿದ ಬಸ್ ಹೆದ್ದಾರಿ ಬದಿಯ ತಡೆಗೋಡೆಯೊಂದಕ್ಕೆ ಡಿಕ್ಕಿಯಾಗಿ ಸೇತುವೆಯ ಕೆಳಗುರುಳಿದ ಭೀಕರ ಅಪಘಾತದಲ್ಲಿ ಚಾಲಕ, ನಿರ್ವಾಹಕ ಸೇರಿ ಬಸ್ಸಿನಲ್ಲಿದ್ದ 8 ಮಂದಿ ಮೃತಪಟ್ಟಿದ್ದಾರೆ. ಅದರಲ್ಲಿ ಬೆಳ್ತಂಗಡಿ ತಾಲೂಕಿನ ನಾಲ್ವರೂ ಮೃತಪಟ್ಟಿದ್ದು, ದೇವಗಿರಿಯ ವಿನು ತೋಮಸ್ ಎಂಬವರು ಗಂಭೀರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ.

ಅಂತ್ಯ ಸಂಸ್ಕಾರ ರಾಕೇಶ್ ಪ್ರಭು ಅವರ ಪಾರ್ಥಿವ ಶರೀರ ಶನಿವಾರ ಸಂಜೆ ಕನ್ಯಾಡಿಗೆ ತರಲಾಗಿದ್ದು, ಅಂತ್ಯ ಸಂಸ್ಕಾರ ನೆರವೇರಿತು. ದೇವಗಿರಿಯ ಸೋನಿಯಾ, ಡಯಾನ ಹಾಗೂ ಬಿಜೋ ಅವರ ಅಂತ್ಯ ಸಂಸ್ಕಾರ ಭಾನುವಾರ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

 

 

LEAVE A REPLY