ಸೌತಡ್ಕ ಗೋಶಾಲೆಯಿಂದ 4 ದನಗಳವು

ಕಬ್ಬಿಣದ ಗೇಟ್ ಮುರಿದಿರುವುದು

ಸೀಸಿ ಕ್ಯಾಮರಾ, ಸೆಕ್ಯೂರಿಟಿ ಇದ್ದರೂ ಕಳ್ಳತನ ನಿರಂತರ !

ನಮ್ಮ ಪ್ರತಿನಿಧಿ ವರದಿ

ಉಪ್ಪಿನಂಗಡಿ : ಬಯಲು ಆಲಯದ ದೇಗುಲವೆಂದು ಖ್ಯಾತಿ ಪಡೆದಿರುವ ಬೆಳ್ತಂಗಡಿ ತಾಲೂಕಿನ ಶ್ರೀ ಕ್ಷೇತ್ರ ಸೌತಡ್ಕ ದೇವಾಲಯದ ಆಡಳಿತ ಮಂಡಳಿಯಿಂದ ನಿರ್ವಹಿಸಲಾಗುತ್ತಿರುವ ಗೋ ಶಾಲೆ ಗೋ ರಕ್ಷಣೆಗಿಂತ ಗೋ ಕಳ್ಳತನದಿಂದಲೇ ಹೆಸರುವಾಸಿಯಾಗಿದೆ. ಕಳೆದ ವರ್ಷಗಳಲ್ಲಿ ಹಲವು ಬಾರಿ ಗೋವುಗಳನ್ನು ಕಳ್ಳತನ ಮಾಡಿರುವ ಘಟನೆ ಇಲ್ಲಿ ನಡೆದಿದೆ.

2016 ಜನವರಿ 5ನೇ ತಾರೀಖಿನಂದು ಇಲ್ಲಿ ಕಟ್ಟಿಹಾಕಲಾಗಿದ್ದ ದಷ್ಟಪುಷ್ಟ 4 ಕೋಣಗಳನ್ನು ಕಳ್ಳರು ರಾತ್ರಿ ವೇಳೆ ಕದ್ದೊಯ್ದಿದ್ದರು. ಇದೀಗ ಮೊನ್ನೆ ಮಂಗಳವಾರ ರಾತ್ರಿ ಮತ್ತೆ ಈ ಗೋ ಶಾಲೆಯ ಕಬ್ಬಿಣದ ಗೇಟೊಂದನ್ನು ಮುರಿದು ಮತ್ತೆ 4 ಗೋವುಗಳನ್ನು ಕದ್ದೊಯ್ಯಲಾಗಿದೆ. 3 ಹಾಲು ಕರೆಯುವ ಗಬ್ಬದ ದನಗಳು ಮತ್ತು 1 ಹೋರಿಯನ್ನು ಕದ್ದೊಯ್ದಿದ್ದಾರೆ. ಪ್ರತೀ ಬಾರಿ ಇಲ್ಲಿ ಗೋಕಳ್ಳತನ ವಾದಾಗಲೂ ಪೊಲೀಸರ ಅದೇಶದಂತೆ ನಿರ್ವಹಣಾ ಹೊಣೆ ಹೊತ್ತವರಿಂದ ಗೋಶಾಲೆಗೆ ಸೀಸಿ ಕ್ಯಾಮರಾ, ರಾತ್ರಿ ಕಾವಲು ಸಿಬ್ಬಂದಿ ಎಲ್ಲ ಅಲರ್ಟ್ ಮಾಡಲಾಗುತ್ತದೆ. ಆದರೆ ಇದು ಕೆಲವೇ ದಿನಗಳಲ್ಲಿ ಮೂಲೆಗುಂಪಾಗಿ ನಿರ್ಲಕ್ಷ್ಯಕ್ಕೊಳಗಾಗುತ್ತದೆ ಅನ್ನುವುದಕ್ಕೆ ಇಲ್ಲಿ ಮಂಗಳವಾರದಂದು ನಡೆದಂತಹ ಗೋಕಳ್ಳತನಗಳೇ ಸಾಕ್ಷಿಯಾಗಿದೆ.

ಧರ್ಮಸ್ಥಳ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದಾಗ ಇಲ್ಲಿರುವ 4 ಸೀಸಿ ಕ್ಯಾಮರಾವೂ ಕೆಟ್ಟಿರುವುದನ್ನು ಗಮನಿಸಿದ್ದಾರೆ. ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.

ಸೌತಡ್ಕದ ಗೋಶಾಲೆ,
ಸೌತಡ್ಕದ ಗೋಶಾಲೆ,

ನಿರ್ವಹಣೆಗಾಗಿ ಲಕ್ಷಾಂತರ ರೂಪಾಯಿ ಹಣ ವ್ಯಯ

ಮುಜರಾಯಿ ಇಲಾಖೆಗೆ ಒಳಪಟ್ಟ ದೇವಳದ ವತಿಯಿಂದ ನಡೆಯುವ ಈ ಗೋಶಾಲೆಯ ನಿರ್ವಹಣೆಗೆ ಪ್ರತೀ ವರ್ಷದಂತೆ 2015-16ನೇ ಸಾಲಿನಲ್ಲೂ 13 ಲಕ್ಷದ 80 ಸಾವಿರ ಅನುದಾನ ಒದಗಿಸಲಾಗಿದೆ. ಕಳೆದ ಜನವರಿಯಲ್ಲಿ ಗೋಶಾಲೆಗೆ ಕಳ್ಳರು ನುಗ್ಗಿದ ಘಟನೆ ನಡೆದ ಮೇಲೆ ಗೋಶಾಲೆಯ ಕಾವಲಿಗೆಂದು ಪೊಲೀಸ್ ಇಲಾಖೆಯ ನಿರ್ದೇಶನದಂತೆ ದೇವಳದ ವತಿಯಿಂದ ಸಾವಿರಗಟ್ಟಲೆ ಸಂಬಳ ನೀಡಿ ಗನ್ ಮ್ಯಾನ್ ಕೂಡಾ ನೇಮಿಸಲಾಗಿದೆ. ಇಲ್ಲಿ ಕೆಲ ವರ್ಷಗಳ ಹಿಂದೆ ಹಾಕಲಾಗಿರುವ ಸೀಸಿ ಕ್ಯಾಮರಾದ ಬಾಬ್ತು ಲಕ್ಷಾಂತರ ಹಣ ಖರ್ಚು ತೋರಿಸುತ್ತದೆ. ಆದರೆ ಪ್ರತೀ ಬಾರಿ ಇಲ್ಲಿ ಗೋ ಕಳ್ಳತನ ವಾದಾಗ ಸೀಸಿ ಕ್ಯಾಮರಾದಲ್ಲಿ ಯಾವ ಮಾಹಿತಿಯೂ ಸಿಗುತ್ತಿಲ್ಲ. ಈ ಬಾರಿಯಂತೂ ಹೊಸದಾಗಿ ನೇಮಿಸಿದ್ದ ಗನ್ ಮ್ಯಾನಿ ಗೂ ರಾತ್ರಿ ವೇಳೆ ಕಳ್ಳತನವಾದ ಸಂಗತಿ ತಿಳಿದದ್ದು ಬೆಳಗ್ಗೆ ಗೋಶಾಲೆಯ ಸಿಬ್ಬಂದಿ ಕೆಲಸಕ್ಕೆ ಬಂದ ಮೇಲೆಯೇ. ಲಕ್ಷಗಟ್ಟಲೆ ಹಣ ಖರ್ಚು ಮಾಡಿದರೂ ಇಲ್ಲಿರುವ ಗೋವುಗಳಿಗೆ ಬದುಕುವ ಭದ್ರತೆ ದೊರೆಯದಿರುವುದು ವಿಪರ್ಯಾಸ.