ನಕಲಿ ದಾಖಲೆ ಸೃಷ್ಟಿಸಿ ಜಾಗ ಮಾರಾಟ ಮಾಡಿ ವಂಚನೆ

ಸಾಂದರ್ಭಿಕ ಚಿತ್ರ

 ನಮ್ಮ ಪ್ರತಿನಿಧಿ ವರದಿ

ಉಡುಪಿ : ನಕಲಿ ದಾಖಲೆ ಸೃಷ್ಟಿಸಿ ಬೇರೊಬ್ಬರ ಜಾಗವನ್ನು ಮಾರಾಟ ಮಾಡಿ ವಂಚಿಸಿದ ನಾಲ್ವರು ಆರೋಪಿಗಳ ವಿರುದ್ಧ ಉಡುಪಿ ನಗರ ಠಾಣೆಯಲ್ಲಿ ಕೇಸು ದಾಖಲಾಗಿದೆ. ನಗರದ ಹೊರವಲಯದ ಉಪ್ಪೂರು ಗ್ರಾಮದ ಕುದ್ರುಬೆಟ್ಟು ನಿವಾಸಿ ಸುನಂದ ಕೋಟ್ಯಾನ್ (54) ವಂಚನೆಗೊಳಗಾದವರು. ಶಿರ್ವ ಗ್ರಾಮದ ಮಟ್ಟಾರು ನಿವಾಸಿ ದಿವಾಕರ ಶೆಣೈ (43), ಶಿರ್ವ ಗ್ರಾಮದ ಬಲ್ಲಾಡಿ ನಿವಾಸಿಗಳಾದ ಇಂದಿರಾ ಬಂಗೇರ (71), ಚಂದ್ರಶೇಖರ ಬಂಗೇರ (50), ಸುಶೀಲ ಬಂಗೇರ (66) ಆರೋಪಿಗಳು.

ಸುನಂದ ಕೋಟ್ಯಾನ್ ತನ್ನ ತಾಯಿಗೆ ಸೇರಿದ ಶಿರ್ವ ಗ್ರಾಮದ ಮಟ್ಟಾರು ಎಂಬಲ್ಲಿಯ 2.47 ಎಕ್ರೆ ಜಾಗವನ್ನು ಹೊಂದಿದ್ದು, ಆರೋಪಿಗಳು ನಕಲಿ ದಾಖಲೆ ಸೃಷ್ಟಿಸಿ ಜಾಗವನ್ನು ದೇವೆಂದ್ರ ನಾಯ್ಕ್ ಎಂಬವರಿಗೆ 5 ಲಕ್ಷ ರೂಪಾಯಿಗೆ ಮಾರಾಟ ಮಾಡಿ ವಂಚಿಸಿದ್ದಲ್ಲದೇ, ಜಾಗಕ್ಕೆ ಅಕ್ರಮವಾಗಿ ಪ್ರವೇಶಿಸಿ ಬೇಲಿ ನಿರ್ಮಿಸಿಸಲು ಯತ್ನಿಸಿದ್ದಾರೆ. ಆ ವೇಳೆ ಜಾಗದ ಹಕ್ಕುದಾರೆ ಸುನಂದ ಕೋಟ್ಯಾನ್ ವಿರೋಧಿಸಿದಾಗ ಆರೋಪಿಗಳು ಕೊಲೆ ಬೆದರಿಕೆಯೊಡ್ಡಿದ್ದಾರೆ ಎಂದು ದೂರಲಾಗಿದೆ. ಈ ಬಗ್ಗೆ ಸುನಂದ ಕೋಟ್ಯಾನ್ ನೀಡಿದ ದೂರಿನಂತೆ ಆರೋಪಿಗಳ ವಿರುದ್ಧ ಉಡುಪಿ ನಗರ ಠಾಣೆಯಲ್ಲಿ ಕೇಸು ದಾಖಲಾಗಿದೆ.