ಬಿಜೆಪಿಯಿಂದ 4 ಪ್ರಮುಖರ ಅಮಾನತು

ಯಲ್ಲಾಪುರ : “ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಪ್ರಸಾದ ಕಾರವಾರಕರ್, ಕಾರವಾರ ಗ್ರಾಮೀಣ ಘಟಕದ ಅಧ್ಯಕ್ಷ ರಾಜನ್ ಕೋಳಂಬಕರ್, ಜಿಲ್ಲಾ ಕಾರ್ಯದರ್ಶಿ ಪೂರ್ಣಿಮಾ ಮಾಹೆಕರ್ ಹಾಗೂ ಜಿಲ್ಲಾ ಸಮಿತಿ ಸದಸ್ಯ ನಾಗರಾಜ ಜೋಶಿ ಅವರನ್ನು ಪಕ್ಷದಿಂದ ಅಮಾನತು ಮಾಡಲಾಗಿದೆ” ಎಂದು ಪಕ್ಷದ ಜಿಲ್ಲಾಧ್ಯಕ್ಷ ಕೆ ಜಿ ನಾಯ್ಕ ಹೇಳಿದರು.

ಅವರು ಗುರುವಾರ ಪತ್ರಕರ್ತರೊಂದಿಗೆ ಮಾತನಾಡಿ, “ಕಾರವಾರದಲ್ಲಿ ಕಳೆದ ಜನವರಿ 6ರಂದು ನಡೆದ ಕಾರವಾರ ಕ್ಷೇತ್ರ ವ್ಯಾಪ್ತಿಯ ಪ್ರಮುಖರ ಸಭೆಯಲ್ಲಿ ನಾಗರಾಜ ಜೋಶಿ ಅವರು ಕ್ಷೇತ್ರ ಉಸ್ತುವಾರಿ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ ಅವರೊಂದಿಗೆ ಅಸಭ್ಯವಾಗಿ ವರ್ತಿಸಿದ್ದರು. ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಪ್ರಸಾದ ಕಾರವಾರಕರ್, ಕಾರವಾರ ಗ್ರಾಮೀಣ ಘಟಕದ ಅಧ್ಯಕ್ಷ ರಾಜನ್ ಕೋಳಂಬಕರ್, ಜಿಲ್ಲಾ ಕಾರ್ಯದರ್ಶಿ ಪೂರ್ಣಿಮಾ ಮಾಹೆಕರ್ ಅವರು ನಾಗರಾಜ ಜೋಶಿ ಜೊತೆ ಸೇರಿ ಪಕ್ಷಕ್ಕೆ ಕಳಂಕ ತರುವ ನಿಟ್ಟಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ತಿಂಗಳೆ ಹಾಗೂ ಪಕ್ಷಕ್ಕೆ ಮುಜುಗುರ ಉಂಟು ಮಾಡುವ ಆರೋಪ ಮಾಡಿದ್ದಾರೆ” ಎಂದು ತಿಳಿಸಿದರು.“ಇವರು ಪತ್ರಿಕಾಗೋಷ್ಠಿ ಕರೆದಿರುವ ವಿಷಯ ತಿಳಿದ ತಕ್ಷಣ ತಾವು ಹಾಗೂ ಪಕ್ಷದ ಪ್ರಮುಖರು ಅವರನ್ನು ಸಂಪರ್ಕಿಸಿ, ಭಿನ್ನಾಭಿಪ್ರಾಯವಿದ್ದಲ್ಲಿ ಪಕ್ಷದ ಹಿರಿಯರೊಂದಿಗೆ ಚರ್ಚಿಸಿ ಬಗೆಹರಿಸಿಕೊಳ್ಳೋಣ, ಪತ್ರಿಕಾಗೋಷ್ಠಿ ನಡೆಸುವುದು ಬೇಡವೆಂದು ಸೂಚಿಸಿದ್ದಾಗ್ಯೂ, ಬೇರೆಯವರ ಚಿತಾವಣೆಯಿಂದ ಪಕ್ಷದ ಶಿಸ್ತನ್ನು ಮೀರಿ ಪಕ್ಷಕ್ಕೆ ದ್ರೋಹ ಬಗೆದಿದ್ದರು. ಕಾರಣ ಅವರನ್ನು ಅಮಾನತಿನಲ್ಲಿಡಲಾಗಿದೆ. ಅವರಿಗೆ ಕಾರಣ ಕೇಳಿ ನೋಟಿಸ್ ನೀಡಲಾಗುವುದು, ಅವರಿಂದ ಉತ್ತರ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಅವರ ಸ್ಥಾನಕ್ಕೆ ಕಾರವಾರ ಗ್ರಾಮೀಣ ಘಟಕದ ಅಧ್ಯಕ್ಷರಾಗಿ ಮಾರುತಿ ಬಾಲಚಂದ್ರ ನಾಯ್ಕ ತೊರ್ಲೆಬಾಗ, ಜಿಲ್ಲಾ ಕಾರ್ಯದರ್ಶಿಯಾಗಿ ಸುಜಾತಾ ಬಾಂದೇಕರ್ ಅವರನ್ನು ನೇಮಕ ಮಾಡಲಾಗಿದೆ” ಎಂದು ತಿಳಿಸಿದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, “ಯಲ್ಲಾಪುರದಲ್ಲಿ ನಡೆದ ಸಭೆಯಲ್ಲಿ ಕಾರ್ಯಕರ್ತರಲ್ಲಿ ಉಂಟಾದ ಗೊಂದಲವನ್ನು ನಿವಾರಿಸಲಾಗಿದ್ದು, ಕ್ಷೇತ್ರದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ” ಎಂದರು.

ರಾಜೀನಾಮೆ ಅಂಗೀಕರಿಸಿಲ್ಲ“ತಾಲೂಕಾಧ್ಯಕ್ಷ ಸ್ಥಾನಕ್ಕೆ ರಾಮು ನಾಯ್ಕ ವೈಯಕ್ತಿಕ ಕಾರಣ ನೀಡಿ ರಾಜೀನಾಮೆ ನೀಡಿದ್ದು, ಅದನ್ನು ಅಂಗೀಕರಿಸಿಲ್ಲ. ಪಕ್ಷದ ಹಿರಿಯರ ಗಮನಕ್ಕೆ ಈ ವಿಷಯವನ್ನು ತರಲಾಗಿದ್ದು, ಅವರೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು. ಯಲ್ಲಾಪುರದಲ್ಲಿ ಬಣ ರಾಜಕೀಯ ಇಲ್ಲ. ಇದ್ದರೂ ಅದು ತಾತ್ಕಾಲಿಕ, ಚುನಾವಣೆಯಲ್ಲಿ ಎಲ್ಲರೂ ಒಂದಾಗಿ ಪಕ್ಷವನ್ನು ಗೆಲ್ಲಿಸಲಿದ್ದೇವೆ” ಎಂದರು.

ಪಕ್ಷದ ಜಿಲ್ಲಾ ವಕ್ತಾರ ಪ್ರಮೋದ ಹೆಗಡೆ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ರೇಖಾ ಹೆಗಡೆ, ಪ್ರಧಾನ ಕಾರ್ಯದರ್ಶಿಗಳಾದ ಕೃಷ್ಣ ಎಸಳೆ, ಗಣಪತಿ ಮುದ್ದೆಪಾಲ, ಎನ್ ಎಸ್ ಹೆಗಡೆ, ವೆಂಕಟೇಶ ನಾಯ್ಕ ಉಪಸ್ಥಿತರಿದ್ದರು.

 

LEAVE A REPLY