ಕೋಟಿ ರೂ ಮೌಲ್ಯದ 4 ಕೇಜಿ ಅಕ್ರಮ ಚಿನ್ನ

ನಾಲ್ವರ ಬಂಧನ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಕಂದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಮಂಗಳೂರು ಜಂಕ್ಷನ್ ರೈಲ್ವೇ ನಿಲ್ದಾಣದಲ್ಲಿ ಕಾರ್ಯಾಚರಣೆ ಮಾಡಿ ನಾಲ್ವರು ಆರೋಪಿಗಳನ್ನು ಬಂಧಿಸಿ ಕೋಟಿ ಮೌಲ್ಯದ ಸುಮಾರು 4 ಕೇಜಿ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.

ಕಾಸರಗೋಡು ಮೂಲದ ದಂಪತಿಗಳಾದ ಹಸನ್ ಮತ್ತು ಸಮೀರ ಎಂಬವರಿಂದ 2.13 ಕೇಜಿ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಇವರಿಬ್ಬರೂ ತಮ್ಮ ಸೊಂಟದ ಬಟ್ಟೆಯೊಳಗೆ ಚಿನ್ನದ ಪಟ್ಟಿಯನ್ನು ಸುತ್ತಿ ಬೆಲ್ಟ್‍ರೂಪದಲ್ಲಿ ತರುತ್ತಿದ್ದರು. ಇವರ ಚಲನವಲನಗಳನ್ನು ಕಂಡು ಅಧಿಕಾರಿಗಳು ತಪಾಸಣೆ ನಡೆಸಿದಾಗ ಚಿನ್ನ ಸಾಗಾಟ ಪತ್ತೆಯಾಗಿದೆ.

ದಂಪತಿಗಳು ಸ್ಪೈಸ್ ಜೆಟ್ ವಿಮಾನದಲ್ಲಿ ದುಬೈನಿಂದ ಮಂಗಳೂರಿಗೆ ಆಗಮಿಸಿದ್ದರು. ರಬ್ಬರ್ ಕವಚದಲ್ಲಿದ್ದ ಬೆಲ್ಟ್‍ನೊಳಗೆ ಒಳಗೆ ಚಿನ್ನದ ಪಟ್ಟಿ ಇರಿಸಲಾಗಿತ್ತು. 23.99 ಕ್ಯಾರೇಟ್ ಚಿನ್ನ ಸುಮಾರು

2137.04 ಗ್ರಾಂ ಇತ್ತು. ಇದರ ಮಾರುಕಟ್ಟೆ ಬೆಲೆ 66 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ಇವರಿಬ್ಬರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಜಾಮೀನಿನಲ್ಲಿ   ಬಿಡುಗಡೆಗೊಂಡಿದ್ದಾರೆ.

ಇನ್ನೊಂದು ಪ್ರಕರಣದಲ್ಲಿ ಮುಂಬಯಿಯ ಪನ್ವೇಲನಿಂದ ಕೋಝಿಕ್ಕೋಡಿಗೆ ಮುರುಸಾಗರ್ ಎಕ್ಸ್‍ಪ್ರೆಸ್ ರೈಲಿನ ಮೂಲಕ ಕೇರಳಕ್ಕೆ ತೆರಳುತ್ತಿದ್ದ ಇಬ್ಬರು  ಒಳಚಡ್ಡಿಯೊಳಗೆ ಚಿನ್ನದ ಬಿಸ್ಕತ್ ಹಾಕಿಕೊಂಡು ಬರುತ್ತಿದ್ದಾಗ ಮಂಗಳೂರು ಜಂಕ್ಷನ್ ರೈಲ್ವೇ ನಿಲ್ದಾಣದಲ್ಲಿ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾರೆ.  16 ಚಿನ್ನದ ಬಿಲ್ಲೆಗಳು ಪತ್ತೆಯಾಗಿದೆ. ಆರೋಪಿಗಳಾದ ಮೊಯ್ದೀನ್ ಮತ್ತು ಸಂಶುದ್ಧೀನ್ ಎಂಬವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. 16 ಚಿನ್ನದ ಗಟ್ಟಿಗಳು 1865.600 ಗ್ರಾಂ ತೂಕ ಹೊಂದಿದ್ದು, ಇವುಗಳ ಮೌಲ್ಯ 56,33,880 ರೂಪಾಯಿ ಎಂದು ಅಂದಾಜಿಸಲಾಗಿದೆ.

 

LEAVE A REPLY